ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ರಾಜ್ಯದ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೊರತಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಈ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಸ್ವೀಕೃತವಾದರೆ ಈ ಅಭ್ಯರ್ಥಿಗಳೇ ಗೆದ್ದಂತೆ.
ಮುಕ್ತೋ ಕ್ಷೇತ್ರದಿಂದ ಪ್ರವಾಸೋದ್ಯಮ ಸಚಿವ ಪೇಮ ಖಂಡು, ನಚೋ ಕ್ಷೇತ್ರದಿಂದ ಗ್ರಾಮೀಣಾಭಿವೃದ್ಧಿ ಸಚಿವ ತಂಗಾ ಬ್ಯಾಲಿಂಗ್, ತಲಿಹಾ ಕ್ಷೇತ್ರದಿಂದ ಪುಂಜಿ ಮಾರಾ, ನ್ಯಾಪಿನ್ ಕ್ಷೇತ್ರದಿಂದ ಬಮಂಗ್ ಫೆಲಿಕ್ಸ್, ಪಶ್ಚಿಮ ಸೆಪ್ಪಾ ಕ್ಷೇತ್ರದಿಂದ ಮಾಮಾ ನಾತುಂಗ್ ಹಾಗೂ ಪಾಲಿನ್ ಕ್ಷೇತ್ರದಿಂದ ಟಕಿಂ ಪರಿಯೋ ಅವರು ಅವಿರೋಧ ಆಯ್ಕೆಯಾಗುವ ಸಂಭವವಿದೆ.
ಅರುಣಾಚಲ: 188 ನಾಮಪತ್ರ
ಅರುಣಾಚಲ ಪ್ರದೇಶ ವಿಧಾನಸಭೆಗೆ ಏಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಒಟ್ಟು 188 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯು 60 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ಪಕ್ಷವು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಉಳಿದಂತೆ ಬಿಜೆಪಿ 49, ಪಿಪಿಎ 20, ಎನ್‌ಸಿಪಿ 12, ಎನ್‌ಪಿಎಫ್ 11, ಎಎಪಿ 1 ಹಾಗೂ 32 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದೇ ದಿನ ನಡೆಯಲಿರುವ 2 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಒಟ್ಟು 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್ 26 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.