ಲಖನೌ (ಪಿಟಿಐ): ಚಹಾದೊಂದಿಗೆ ಚರ್ಚೆ (ಚಾಯ್ ಪೆ ಚರ್ಚಾ) ಕಾರ್ಯಕ್ರಮ ಆಯೋಜಿಸುವುದಕ್ಕೆ ಅನುಮತಿ ಪಡೆದುಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘನೆ ಆಗಬಾರದು ಎಂದು ಬಿಜೆಪಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಚಹಾ ವಿತರಣೆಯನ್ನೇ ನಿಷೇಧಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗೆ ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ. ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದು. ಆದರೆ ಅಲ್ಲಿ ವಿತರಿಸಲಾಗುವ ಚಹಾದ ವೆಚ್ಚವನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರೇ ಭರಿಸಬೇಕು ಎಂಬ ಷರತ್ತು ಇದೆ ಎಂದು ಅವರು ತಿಳಿಸಿದ್ದಾರೆ.
ಭಾನುವಾರ ಬಿಜೆಪಿಯ 24 ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಲಖಿಂಪುರ ಕೇರಿ ಜಿಲ್ಲೆಯ ಮೊಹಮ್ಮದಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಮೊಹಮ್ಮದಿ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಚಹಾ ಅಂಗಡಿಗಳನ್ನು ಹಾಕಿ ದಾರಿಯಲ್ಲಿ ಹೋಗುವವರಿಗೆ ಚಹಾ ವಿತರಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಲಾಗಿತ್ತು.
ಬೆಂಗಳೂರು ವರದಿ: ಉತ್ತರ ಪ್ರದೇಶದಲ್ಲಿ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಉಚಿತ ಚಹಾ ವಿತರಣೆಗೆ ನಿಷೇಧ ಹೇರಿರುವ ಆಯೋಗದ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿರುವ ಬಿಜೆಪಿ, ಎಎಪಿ ಮುಖಂಡ ಬೆಂಗಳೂರಿನಲ್ಲಿ ತಲಾ ₨ 20 ಸಾವಿರ ಪಡೆದು ಭೋಜನ ಕೂಟ ಏರ್ಪಡಿಸಿರುವುದನ್ನು ಯಾಕೆ ತಡೆದಿಲ್ಲ ಎಂದು ಪ್ರಶ್ನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.