ಪುದುಚೇರಿ (ಪಿಟಿಐ): ತಮಿಳುನಾಡಿನಲ್ಲಿ ಬಿಜೆಪಿ ಒಳಗೊಂಡಂತೆ ಏಳು ಪಕ್ಷಗಳ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದು ಕೇವಲ ಒಂದೇ ದಿನ ಕಳೆಯುವಷ್ಟರಲ್ಲಿ ಬಿರುಕು ಕಾಣಿಸಿಕೊಂಡಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿ ಲೋಕಸಭೆ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಪಿಎಂಕೆ ಶುಕ್ರವಾರ ಘೋಷಿಸಿದೆ. ಆದರೆ, ಇಲ್ಲಿಂದ ಈಗಾಗಲೇ ಎಐಎನ್‌ಆರ್‌ಸಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಈ ಎರಡೂ ಪಕ್ಷಗಳು ಏಳು ಪಕ್ಷಗಳ ಮೈತ್ರಿಕೂಟದ ಭಾಗವಾಗಿವೆ. ಪಿಎಂಕೆಯ ಈ ನಡೆಯಿಂದ ಮೈತ್ರಿಕೂಟ ಮುಜುಗರಕ್ಕೊಳಗಾಗುವಂತಾಗಿದೆ.
ಪಿಎಂಕೆ ಪುದುಚೇರಿ ಘಟಕದ ಸಂಘಟಕ ಮತ್ತು ಮಾಜಿ ಶಾಸಕ ಆರ್.ಕೆ.ಆರ್. ಆನಂದ್‌ರಾಮನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ‘ಅನಗತ್ಯ ಗೊಂದಲ ಮತ್ತು ಮುಜುಗರಕ್ಕೆ ಎಡೆಮಾಡಿಕೊಡುವುದು ಬೇಡ’ ಎಂದು ಪುದುಚೇರಿ ಬಿಜೆಪಿ ಘಟಕದ ಅಧ್ಯಕ್ಷ ಎಂ. ವಿಶ್ವೇಶ್ವರನ್ ಹೇಳಿದ್ದಾರೆ.
ಈ ಕುರಿತು ಆನಂದ್‌ರಾಮನ್ ಅವರೊಂದಿಗೆ ಚರ್ಚಿಸಿ ಅವರ ಮನವೊಲಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಗುರುವಾರ ಚೆನ್ನೈನಲ್ಲಿ ಏಳು ಪಕ್ಷಗಳ ಮೈತ್ರಿಕೂಟವನ್ನು ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.