ADVERTISEMENT

ಚುನಾವಣೆ ವೆಚ್ಚ ₨3,426 ಕೋಟಿ

ಸರ್ಕಾರಕ್ಕೆ ಕಳೆದ ಬಾರಿಗಿಂತ ಶೇ 131ರಷ್ಟು ಖರ್ಚು ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2014, 19:30 IST
Last Updated 13 ಮೇ 2014, 19:30 IST

ನವದೆಹಲಿ (ಪಿಟಿಐ): ಈ ಬಾರಿಯ ಚುನಾವಣೆ ಭಾರತದ ಚುನಾವಣಾ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ. ಈ ಸಲದ ಚುನಾವಣೆಗೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಶೇ 131ರಷ್ಟು ಹೆಚ್ಚು ಖರ್ಚಾಗಿದ್ದು ಒಟ್ಟು   ವೆಚ್ಚ ₨ 3,426 ಕೋಟಿಯಾಗಿದೆ.
ಐದು ವರ್ಷಗಳ ಹಿಂದೆ ನಡೆದ ಲೋಕಸಭಾ ಚುನಾವಣೆಗೆ ಆಗಿರುವ ವೆಚ್ಚ ₨ 1,483 ಕೋಟಿ.

ಒಂಬತ್ತು ಹಂತಗಳ ಮತದಾನದಲ್ಲಿ ಸರ್ಕಾರ, ರಾಜಕೀಯ ಪಕ್ಷಗಳು  ಮತ್ತು ಅಭ್ಯರ್ಥಿಗಳಿಂದ ಒಟ್ಟು ₨ 30 ಸಾವಿರ ಕೋಟಿ ಖರ್ಚು ಆಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಸರ್ಕಾ­ರಕ್ಕೆ ಚುನಾವಣೆ ನಡೆಸಲು ಆಗಿರುವ ವೆಚ್ಚವೂ ಸೇರಿದೆ.

ಸರ್ಕಾರಕ್ಕೆ ಆಗಿರುವ ವೆಚ್ಚದ ಹೆಚ್ಚಳಕ್ಕೆ ಒಂದು ಕಾರಣ ಹಣದುಬ್ಬರ ಎಂದು ಚುನಾವಣಾ ಆಯೋಗ ಹೇಳಿದೆ. ಇದಲ್ಲದೆ, ಮತದಾನ ಪ್ರಮಾಣ ಹೆಚ್ಚಿಸುವುದಕ್ಕಾಗಿ ಆಯೋಗ ಕೈಗೊಂಡಿ­ರುವ ಹಲವು ಕ್ರಮಗಳು ಕೂಡ ವೆಚ್ಚ ಏರಿಕೆಯಾಗಲು ಕಾರಣವಾಗಿವೆ.

ಹಲವು ಪಕ್ಷಗಳು ಚುನಾವಣಾ ರಾಜಕೀಯಕ್ಕೆ ಇಳಿದಿವೆ. ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೂ ಗಣನೀಯ­ವಾಗಿ ಏರಿದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಂತೆ ವೆಚ್ಚವೂ ಹೆಚ್ಚಾಗುತ್ತದೆ.

ಮತದಾರರ ಜಾಗೃತಿ ಕಾರ್ಯಕ್ರಮ­ಗಳು, ಮತದಾನಕ್ಕೆ ಮೊದಲು ಚೀಟಿ ವಿತರಣೆ, ಮೊದಲ ಬಾರಿಗೆ ಜಾರಿಗೊಳಿಸಲಾದ ಮತದಾರರಿಂದ ಮತದಾನ ದೃಢೀಕರಣ ವ್ಯವಸ್ಥೆಗಳು ಚುನಾವಣೆಗಾಗಿ ಸರ್ಕಾರದ ಖರ್ಚು ಏರುವಂತೆ ಮಾಡಿವೆ.

1952ರ ಮೊದಲ ಮತದಾನದಿಂದ 2009ರ ಹೊತ್ತಿಗೆ ಚುನಾವಣೆಗೆ ಮಾಡುವ ಖರ್ಚು 20 ಪಟ್ಟು ಏರಿಕೆಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. 1952ರಲ್ಲಿ ಒಬ್ಬ ಮತದಾರನಿಗೆ ಸರ್ಕಾರ ಮಾಡಿದ್ದ ಖರ್ಚು 60 ಪೈಸೆ ಮಾತ್ರ. ಆದರೆ 2009ರಲ್ಲಿ ಅದು ₨ 12ಕ್ಕೆ ಏರಿತ್ತು.

1952ರಲ್ಲಿ ಚುನಾವಣೆಗೆ ಆದ ಒಟ್ಟು ವೆಚ್ಚ ₨ 10.45 ಕೋಟಿ. 2009ರಲ್ಲಿ ಅದು ₨ 1,483 ಕೋಟಿ ಆಗಿತ್ತು. 2004ರ ಲೋಕಸಭಾ ಚುನಾ­ವಣೆಗೆ ₨ 1,114 ಕೋಟಿ ವೆಚ್ಚ­ವಾಗಿತ್ತು.  ಒಬ್ಬೊಬ್ಬ ಮತದಾರ­ನಿಗೂ ಸರ್ಕಾರ ಮಾಡಿದ ವೆಚ್ಚ ₨ 17 ಆಗಿತ್ತು.  1999ರ ಚುನಾವಣೆಗೆ ಹೋಲಿಸಿದರೆ 2004ರಲ್ಲಿ ಮತದಾನದ ವೆಚ್ಚ ಶೇ 17.53ರಷ್ಟು ಏರಿಕೆಯಾಗಿತ್ತು.

ಚುನಾವಣೆಯ ಸಂಪೂರ್ಣ ವೆಚ್ಚ­ವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ­ಗಾಗಿ ಆಗುವ  ವೆಚ್ಚವನ್ನು ಆಯಾ ರಾಜ್ಯ ಸರ್ಕಾರಗಳೇ ಭರಿಸಬೇಕು.

ರಾಜಕೀಯ ಪಕ್ಷಗಳು, ಅಭ್ಯರ್ಥಿ­ಗಳು ಮಾಡುವ ವೆಚ್ಚವೇ ಚುನಾವಣೆಯಲ್ಲಿ ಅತಿ ದೊಡ್ಡ ಖರ್ಚು. ಈ ಬಾರಿ ಅಭ್ಯರ್ಥಿ­ಗಳ ಖರ್ಚಿನ ಮಿತಿ ₨ 40 ಲಕ್ಷದಿಂದ ₨ 70 ಲಕ್ಷಕ್ಕೆ ಏರಿಸಲಾಗಿದೆ.  ಇದು ಚುನಾ­ವಣೆಯ ಒಟ್ಟು ಖರ್ಚಿನ ಏರಿಕೆಯಲ್ಲಿ ಪ್ರಮುಖವಾಗುತ್ತದೆ. 16ನೇ ಲೋಕ­ಸಭೆ ಚುನಾವಣೆಯ ವೆಚ್ಚ 2012ರ ಅಮೆರಿಕದ ಅಧ್ಯಕ್ಷೀಯ  ಚುನಾ­ವಣೆ­ಯಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಮಾಡಿದ ಖರ್ಚಿನ ಸಮೀಪಕ್ಕೆ ಬಂದಿದೆ.  ಅಮೆರಿಕದ ಚುನಾವಣೆಗೆ ಸುಮಾರು  ₨ 42,000 ಕೋಟಿ ವೆಚ್ಚವಾಗಿತ್ತು.

ಸೆಂಟರ್‌ ಫಾರ್‌ ಮೀಡಿಯ ಸ್ಟಡೀಸ್‌ ಸಂಸ್ಥೆ ನಡೆಸಿದ ಅಧ್ಯಯನ ಪ್ರಕಾರ, ಚುನಾವಣೆಗೆ ಬಳಕೆಯಾದ ಕಪ್ಪು ಹಣ, ಕೋಟ್ಯಧಿಪತಿ ಅಭ್ಯರ್ಥಿಗಳು ಮಾಡಿದ ವೆಚ್ಚ, ಉದ್ಯಮಸಂಸ್ಥೆಗಳು ಮತ್ತು ಗುತ್ತಿಗೆದಾರರು  ನೀಡಿದ ಹಣಗಳೆಲ್ಲವೂ ಈ ಬಾರಿಯ ಚುನಾವಣೆಯ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಏರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.