
ಚೆನ್ನೈ (ಪಿಟಿಐ): ಯಾವುದೇ ರಾಷ್ಟ್ರೀಯ ಪಕ್ಷಗಳ ಜೊತೆಗೆ ಹೊಂದಾಣಿಕೆ ಇಲ್ಲದೆಯೂ ತಮಿಳುನಾಡಿನಲ್ಲಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ವ್ಯಕ್ತಪಡಿಸಿದ್ದಾರೆ.
ಮತದಾರರಿಗೆ ಉಚಿತ ಕೊಡುಗೆಗಳ ಎಐಎಡಿಎಂಕೆ ಪ್ರಣಾಳಿಕೆಗಿಂತ ಭಿನ್ನವಾಗಿ ಜಗತ್ತಿನಾದ್ಯಂತ ಇರುವ ತಮಿಳರ ಏಳಿಗೆಗಾಗಿ ಶ್ರಮಿಸುವ ಭರವಸೆಯ ಪ್ರಣಾಳಿಕೆಯನ್ನು ಕರುಣಾನಿಧಿ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಆದಾಯ ತೆರಿಗೆ ಮಿತಿಯನ್ನು ಪುರುಷರಿಗೆ ₨ ಆರು ಲಕ್ಷ ಮತ್ತು ಮಹಿಳೆಯರಿಗೆ ₨ 7.20 ಲಕ್ಷಕ್ಕೆ ಏರಿಸುವಂತೆ ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಭರವಸೆಯನ್ನು ಡಿಎಂಕೆ ನೀಡಿದೆ. ತಮಿಳರು ಗಣನೀಯ ಪ್ರಮಾಣದಲ್ಲಿರುವ ವಿವಿಧ ದೇಶಗಳಲ್ಲಿ ತಮಿಳು ರಾಯಭಾರಿ ನೇಮಕವೂ ಪ್ರಣಾಳಿಕೆಯಲ್ಲಿ ಸೇರಿದೆ.
ಡಿಎಂಕೆಯ ನೆಚ್ಚಿನ ಸೇತುಸಮುದ್ರಂ ಯೋಜನೆ, ಜಾತಿ ರಹಿತ, ಸಮ ಸಮಾಜಕ್ಕಾಗಿ ಎಲ್ಲ ಜಾತಿ, ಧರ್ಮಗಳ ಜನರಿಗೆ ವಸತಿ ಬಡಾವಣೆ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುವ ಭರವಸೆಯನ್ನೂ ಪ್ರಣಾಳಿಕೆ ನೀಡಿದೆ. ಎಲ್ಲ ನದಿಗಳ ರಾಷ್ಟ್ರೀಕರಣ ಮತ್ತು ಜೋಡಣೆ, ಶಿಕ್ಷಣ ಮತ್ತು ಕೃಷಿ ಸಾಲ ಮನ್ನಾ, ಮೀನುಗಾರರಿಗೆ ಪರಿಶಿಷ್ಟ ಪಂಗಡ ಸ್ಥಾನಮಾನ ಡಿಎಂಕೆಯ ಇತರ ಭರವಸೆಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.