ADVERTISEMENT

ತವರಿನಿಂದಲೇ ಮೋದಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಅಹಮದಾಬಾದ್‌ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ರಾಜ್ಯದ ಒಂದು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ’ ಎಂದು ಗುಜರಾತ್‌ ಬಿಜೆಪಿ ಘಟಕ ಘೋಷಿಸಿದೆ.

‘ಗುಜರಾತ್‌ನ ಒಂದು ಸ್ಥಾನದಿಂದ ಮೋದಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವುದನ್ನು ಖಚಿತವಾಗಿ ಹೇಳಬಲ್ಲೆ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯ್‌ ರುಪಾನಿ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಅಹಮದಾಬಾದ್‌, ರಾಜ್‌ಕೋಟ್‌, ವಡೋದರಾ ಮತ್ತು ಸೂರತ್‌ ಈ ನಾಲ್ಕರಲ್ಲಿ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡುತ್ತೇವೆ. ಮೋದಿ ಅವರು ಗುಜರಾತ್‌ನಿಂದಲೇ ಸ್ಪರ್ಧಿಸ­ಬೇಕೆಂದು ಪಕ್ಷದ ಕಾರ್ಯಕರ್ತರು ಇಚ್ಛೆ ವ್ಯಕ್ತಪಡಿಸಿದ್ದಾರೆ’  ಎಂದು ಹೇಳಿದ್ದಾರೆ.

‘ಕಳೆದ ನಾಲ್ಕು ದಿನಗಳಿಂದ ಇಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಸಂಸದೀಯ ಮಂಡಳಿಯ ಸಭೆಯಲ್ಲಿ ಮೋದಿ ಅವರು ಗುಜರಾತ್‌ನಿಂದ ಸ್ಪರ್ಧಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಯಾವ ಕ್ಷೇತ್ರದಿಂದ ಮೋದಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವುದು ಇನ್ನಷ್ಟೇ ಅಂತಿಮವಾ­ಗಬೇಕಿದೆ’ ಎಂದಿದ್ದಾರೆ.

ಮೋದಿ ಅವರು ಉತ್ತರ ಪ್ರದೇಶದ ವಾರಾಣಸಿಯಿಂದಲೂ ಸ್ಪರ್ಧಿಸಲಿ­ದ್ದಾರೆಯೇ ಎಂಬ ಪ್ರಶ್ನೆಗೆ, ‘ಈ ಕುರಿತು ನನಗೇನೂ ತಿಳಿದಿಲ್ಲ. ಆದರೆ, ಈ ಬಗ್ಗೆ ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಎಲ್‌.ಕೆ. ಅಡ್ವಾಣಿ ಅವರು ಗಾಂಧಿನಗರದಿಂದ ಕಣಕ್ಕಿಳಿಯುವರೇ ಎಂಬ ಇನ್ನೊಂದು ಪ್ರಶ್ನೆಗೆ, ‘ಈ ಕ್ಷೇತ್ರದಿಂದ ಅವರು 5 ಬಾರಿ ಆಯ್ಕೆಯಾ­ಗಿದ್ದಾರೆ. ಈ  ಬಗ್ಗೆ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.