ಪಟ್ನಾ (ಐಎಎನ್‌ಎಸ್): ತಮಗೆ ಹಾಗೂ ಕುಟುಂಬಕ್ಕೆ ಅಂಟಿರುವ ದೌರ್ಭಾಗ್ಯ ದೂರವಾಗಿ, ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಪರವಾಗಿ ಉತ್ತಮ ಫಲಿತಾಂಶ ಬರುವಂತಾಗಲಿ ಎಂದು ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಅವರು ವಾಸ್ತುಶಾಸ್ತ್ರದ ಮೊರೆ ಹೋಗಿದ್ದಾರೆ.
‘ವಾಸ್ತು ಶಾಸ್ತ್ರಜ್ಞರ ಸಲಹೆಯಂತೆ ರಾಬ್ಡಿ ದೇವಿ ಅವರ ಮನೆಯಲ್ಲಿದ್ದ ಹೊಂಡವನ್ನು ಮರಳು ಮತ್ತು ಮಣ್ಣಿನಿಂದ ಮುಚ್ಚಲಾಗಿದೆ’ ಎಂದು ಅವರ ಮನೆಯ ಕೆಲಸಗಾರರು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಮುಖಂಡರು ಪಕ್ಷ ತ್ಯಜಿಸಿ ಬೇರೆ ಪಕ್ಷ ಸೇರಿದ್ದಕ್ಕೆ ವಾಸ್ತು ದೋಷವೇ ಕಾರಣವೆಂದು ನಂಬಿದ ಲಾಲು ವಾಸ್ತುಶಾಸ್ತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಆರ್‌ಜೆಡಿ ಅಧಿಕಾರದ ಅವಧಿ ಮುಗಿದ ನಂತರ 2006ರಲ್ಲಿ ಲಾಲು ದಂಪತಿ ಈಗ ಇರುವ ಮನೆಗೆ ಸ್ಥಳಾಂತರಗೊಂಡಿದ್ದರು. ‘ಛಾತ್’ ಹಬ್ಬದ ಸಂದರ್ಭದಲ್ಲಿ ಈ ಹೊಂಡವನ್ನು ತೆಗೆಯಲಾಗಿತ್ತು.
‘1990ರಲ್ಲಿ ಲಾಲು ಮುಖ್ಯಮಂತ್ರಿಯಾದಾಗ ಅವರು ಬಾಬಾಗಳು ಹಾಗೂ ಧಾರ್ಮಿಕ ನಂಬಿಕೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಆದರೆ, ಕೆಲ ಸಮಯದಿಂದ ಅವರ ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದು, ಈಗ ಅವರೂ ಮೂಢನಂಬಿಕೆಯ ಮೊರೆ ಹೊಗಿದ್ದಾರೆ’ ಎಂದು ಜೆಡಿಯು ಮುಖಂಡರು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.