ADVERTISEMENT

ಬಿಜೆಪಿ ಅತಿ ದೊಡ್ಡ ಪಕ್ಷ

ಎನ್‌ಡಿಟಿವಿ –ಹನ್ಸಾ ರಿಸರ್ಚ್‌ ಚುನಾವಣಾ ಪೂರ್ವ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಈ ಬಾರಿಯ ಲೋಕಸಭೆ ಚುನಾವಣೆ­ಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು  195 ಸ್ಥಾನಗಳನ್ನು ಗೆಲ್ಲಬಹುದು ಎಂದು ಎನ್‌ಡಿಟಿವಿ–ಹನ್ಸಾ ರಿಸರ್ಚ್‌ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಇದು ಬಿಜೆಪಿಯ 34 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಸ್ಥಾನಗಳಾಗಿವೆ.

ಕಾಂಗ್ರೆಸ್‌ ಪಕ್ಷವು 106 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದ್ದು, ಇದು ಕಾಂಗ್ರೆಸ್‌ ಇತಿಹಾಸ­ದಲ್ಲಿಯೇ ಅತ್ಯಂತ ಕಡಿಮೆ ಸ್ಥಾನಗಳಾಗಿವೆ. ಬಿಜೆಪಿ ನೇತೃತ್ವದ ಎನ್‌ಡಿಎ 229 ಸ್ಥಾನಗಳನ್ನು ಪಡೆಯ­ಲಿದ್ದು 545 ಸದಸ್ಯರ ಲೋಕಸಭೆಯಲ್ಲಿ ಬಹುಮತದ 272ರ ಸಂಖ್ಯೆ ತಲುಪಲು 43 ಸ್ಥಾನಗಳ ಕೊರತೆಯಾಗಲಿದೆ.

ಒಟ್ಟು 185 ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳು, ಚಿಕ್ಕ ಪಕ್ಷ­ಗಳು ಮತ್ತು ಎರಡಂಗಕ್ಕೆ ದೊರೆಯಲಿವೆ ಎಂದು ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡ­ಲಿದ್ದು 80ರಲ್ಲಿ 40 ಸ್ಥಾನಗಳನ್ನು ಪಡೆಯಲಿದೆ. ರಾಜಸ್ತಾನ, ಕರ್ನಾಟಕ, ಮಧ್ಯಪ್ರದೇಶ ಮತ್ತು ಗುಜರಾತ್‌­ನಲ್ಲಿ ಬಿಜೆಪಿ ಬಹುತೇಕ ಸ್ಥಾನ­ಗಳನ್ನು ಬಾಚಿಕೊಳ್ಳಲಿದ್ದು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಲಿದೆ  ಎಂದು ಸಮೀಕ್ಷೆ ಹೇಳಿದೆ.

ತಮಿಳುನಾಡಿನ 39 ಸ್ಥಾನಗಳಲ್ಲಿ 27 ಸ್ಥಾನಗಳು ಆಡಳಿತಾರೂಢ ಎಐಎಡಿಎಂಕೆಗೆ ದೊರೆಯಲಿದೆ. ಡಿಎಂಕೆ 10 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ಗುಜರಾತ್‌ನ 26ರಲ್ಲಿ 23, ಮಧ್ಯ ಪ್ರದೇಶದ 29ರಲ್ಲಿ 26 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಪಶ್ಚಿಮ ಬಂಗಾಳದ 42ರಲ್ಲಿ  ಟಿಎಂಸಿ 32, ಎಡರಂಗ ಒಂಬತ್ತು ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್‌ಗೆ ಒಂದು ಸ್ಥಾನ ಮಾತ್ರ ದೊರೆಯಲಿದೆ. ಬಿಹಾರ­ದಲ್ಲಿ 40ರಲ್ಲಿ ಬಿಜೆಪಿ–ಎಲ್‌ಜೆಪಿ ಮೈತ್ರಿಕೂಟ 23, ಕಾಂಗ್ರೆಸ್‌–ಆರ್‌ಜೆಡಿ 11 ಮತ್ತು ಜೆಡಿಯು 5 ಸ್ಥಾನ ಪಡೆಯಲಿವೆ.

ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿರುವ ಆಮ್‌ ಆದ್ಮಿ ಪಕ್ಷ ದೆಹಲಿಯ ನಾಲ್ಕು ಲೋಕಸಭೆ ಕ್ಷೇತ್ರಗಳನ್ನು ಗೆದ್ದುಕೊಳ್ಳಲಿದೆ. ಅಲ್ಲಿ ಬಿಜೆಪಿಗೆ 2 ಮತ್ತು ಕಾಂಗ್ರೆಸ್‌ಗೆ 1 ಸ್ಥಾನ ದೊರೆಯಲಿದೆ. ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಪ್ರಶ್ನೆಗೆ  ನರೇಂದ್ರ ಮೋದಿ ಅವರಿಗೆ ಶೇ 42 ಮತ್ತು ರಾಹುಲ್‌ ಗಾಂಧಿ ಅವರಿಗೆ ಶೇ 27 ಮತಗಳು ದೊರೆತಿವೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಆಘಾತ
ಕರ್ನಾಟಕದಲ್ಲಿ ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಸಾಧನೆ ತೋರಿದ್ದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 20 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ ಆರು ಮತ್ತು ಜೆಡಿಎಸ್‌ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.