ADVERTISEMENT

ಬಿಜೆಪಿ ಟಿಕೆಟ್‌ ವಂಚಿತರ ಬಂಡಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಜೋಧ್‌ಪುರ (ಪಿಟಿಐ): ಬಿಜೆಪಿಯಲ್ಲಿ ಲೋಕಸಭಾ ಟಿಕೆಟ್‌ ನಿರಾಕರಣೆಗೆ ಒಳಗಾಗಿರುವ ನಾಯಕರು  ಬಂಡಾಯದ ಹಾದಿ ತುಳಿಯುವುದು ನಿಚ್ಚಳವಾಗಿದೆ.
ರಾಜಸ್ತಾನದ ಬಾರ್ಮೇರ್‌ ಕ್ಷೇತ್ರದ ಟಿಕೆಟ್‌ ಬಯಸಿ ನಿರಾಕರಣೆಗೆ ಒಳಗಾ­ಗಿರುವ ಬಿಜೆಪಿ ಹಿರಿಯ ನಾಯಕ ಮತ್ತು ಎಲ್‌.ಕೆ. ಅಡ್ವಾಣಿ ಅವರ ಆಪ್ತ
ಜಸ್ವಂತ್‌ ಸಿಂಗ್‌ ಅದೇ ಕ್ಷೇತ್ರದಿಂದ ಸ್ಪರ್ಧಿಸುವು­ದಾಗಿ ತಿಳಿಸಿದ್ದಾರೆ.

ಪಕ್ಷೇತರರಾಗಿ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, ‘ಅದು ಪಕ್ಷದ ಧೋರಣೆಯ ಮೇಲೆ ಅವಲಂಬಿತವಾಗಿದೆ. ನಾನಂತೂ ಸೋಮವಾರ ಬಾರ್ಮೇರ್‌ನಿಂದ ನಾಮ­ಪತ್ರ ಸಲ್ಲಿಸಲಿದ್ದೇನೆ’ ಎಂದು ಜಸ್ವಂತ್‌ ಹೇಳಿದರು.

ಪಕ್ಷ ಕೈಗೊಂಡ ನಿರ್ಧಾರಕ್ಕೆ ಹೊಂದಾಣಿಕೆ ಮಾಡಿಕೊಳ್ಳ­ಬೇಕೆಂಬ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್‌ ಅವರ ಹೇಳಿಕೆ ಜಸ್ವಂತ್‌ ಅವರನ್ನು ಕೆರಳಿಸಿದೆ. ‘ಬೇಕಾದಾಗ ಹೊಂದಾಣಿಕೆ ಮಾಡಿಕೊಳ್ಳಲು ನಾನು ಪೀಠೋಪಕರಣ ಅಲ್ಲ’ ಎಂದು  ತಿರುಗೇಟು ನೀಡಿದ್ದಾರೆ. ಅಡ್ವಾಣಿಯವರ ಇನ್ನೊಬ್ಬ ಆಪ್ತ ಏಳು ಬಾರಿಯ ಸಂಸದ ಹರಿನ್‌ ಪಾಠಕ್‌ ಅವರು ಅಹಮದಾಬಾದ್‌ ಪೂರ್ವ ಕ್ಷೇತ್ರದ ಟಿಕೆಟ್‌ ನಿರಾಕರಣೆಯಿಂದ ತಮ್ಮ ಮನಸ್ಸಿಗೆ ತೀವ್ರ ಘಾಸಿಯಾಗಿದೆ  ಎಂದು ಹೇಳಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳುವ ಮೂಲಕ ಬಂಡಾಯದ ಸೂಚನೆ ನೀಡಿದ್ದಾರೆ.

ಬಿಜೆಪಿಯಿಂದ ಮತ್ತೊಬ್ಬ ಪಕ್ಷೇತರ
ರಾಜಸ್ತಾನದ ಪ್ರಭಾವಿ ಜಾಟ್ ನಾಯಕ ಸುಭಾಷ್‌ ಮಹಾರಿಯ ಕೂಡ ಸಿಕಾರ್‌ ಕ್ಷೇತ್ರದ ಟಿಕೆಟ್‌ ನಿರಾಕರಣೆ­ಯಿಂದ ಸಿಟ್ಟಾಗಿದ್ದು ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.  ಮಧ್ಯಪ್ರದೇಶದ ಮಂಡ್ಸೋರ್‌  ಕ್ಷೇತ್ರದಿಂದ ಟಿಕೆಟ್‌ ಕೇಳಿದ್ದ ರಾಜ್ಯ ಘಟಕದ ಉಪಾಧ್ಯಕ್ಷ ರಘುನಂದನ್‌ ಶರ್ಮಾ ಅವರಿಗೂ ಟಿಕೆಟ್‌ ನಿರಾಕರಿಸಲಾಗಿದೆ. ಇದು ತಮಗೆ  ನೋವು ಮತ್ತು ಅವಮಾನ ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.