ಶಿಮ್ಲಾ: ಧರ್ಮಶಾಲಾದಿಂದ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅನುಮತಿ ಕೋರಿದ್ದ ಕಂಗ್ರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಶರ್ಮಾ ಅವರ ಮನವಿಯನ್ನು ಹಿಮಾಚಲ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ತಿರಸ್ಕರಿಸಿದ್ದಾರೆ. ಶರ್ಮಾ ಅವರ ಮತದಾರರ ನೋಂದಣಿಯು ಶಿಮ್ಲಾದಲ್ಲಿದೆ.
ಹಿಮಾಚಲ ಪ್ರದೇಶದ ಎಲ್ಲ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಜೂನ್ 1ರಂದು ಚುನಾವಣೆಯ ನಿಗದಿಯಾಗಿದೆ.
ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ನೀರಾಕರಿಸಿರುವುದು ಅನ್ಯಾಯ ಮತ್ತು ಅಸಂವಿಧಾನಿಕವಾಗಿದೆ ಎಂದು ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.
ನಿಯಮಗಳ ಪ್ರಕಾರ ವಿಶೇಷ ಮತದಾರರು, ಸೇವಾ ಮತದಾರರು, ಚುನಾವಣಾ ಕರ್ತವ್ಯದಲ್ಲಿರುವ ಮತದಾರರು, ಬಂಧನಕ್ಕೆ ಒಳಗಾಗಿರುವ ಮತದಾರರು, 1960ರ ಚುನಾವಣಾ ನಿಯಮಗಳ ವಿಭಾಗ ‘ಸಿ’ಯ ಕಲಂ 60ರ ಅಡಿಯಲ್ಲಿ ಅಧಿಸೂಚಿಸಲ್ಪಟ್ಟವರು ಮಾತ್ರ ಮತಚಲಾಯಿಸಲು ಅರ್ಹರಾಗಿದ್ದಾರೆ. ಶರ್ಮಾ ಅವರು ಈ ಯಾವುದೇ ವರ್ಗಗಳ ಅಡಿ ಬರುವುದಿಲ್ಲ ಎಂದು ಸಿಇಒ ಅವರು ಅನುಮತಿ ನಿರಾಕರಿಸಿದ್ದಾರೆ.
ಕಲಂ 60ರ ಪ್ರಕಾರ, ಆರೋಗ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ ದಳ, ಜೈಲು, ಅಬಕಾರಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರ ಸೇವೆಗಳಲ್ಲಿ ಇರುವವರು ಮತದಾನದ ದಿನದಂದು ಕರ್ತವ್ಯದಲ್ಲಿ ಇರುವ ಕಾರಣ ತಮ್ಮ ಮತಗಟ್ಟೆಗೆ ಹೋಗಿ ಮತ ಚಲಾಯಿಸಲು ಆಗುವುದಿಲ್ಲ. ಹೀಗಾಗಿ ಅವರಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅವಕಾಶ ದೊರೆಯುತ್ತದೆ.
ಈ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿದ ಶರ್ಮಾ, ‘ಚುನಾವಣಾ ಆಯೋಗ ಒಂದೆಡೆ ಮತದಾನ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಮತ್ತು ಇನ್ನೊಂದೆಡೆ ಹಿರಿಯ ನಾಗರಿಕನಾಗಿದ್ದರೂ ನಾನು ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಎಂಬ ಕಾರಣಕ್ಕೆ ಮತದಾನದ ಹಕ್ಕು ಚಲಾಯಿಸದಂತೆ ನಿರಾಕರಿಸಿದೆ. ಇದು ದುರದೃಷ್ಟಕರ’ ಎಂದಿದ್ದಾರೆ. ಆಯೋಗದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.