ADVERTISEMENT

ಬೀದಿಗೆ ಬಂದ ಆಂತರಿಕ ಬೇಗುದಿ; ಭಿನ್ನಮತದ ಬಿಸಿಗೆ ಕೈ– ಕಮಲ ತಳಮಳ

ತಿರುಗಿಬಿದ್ದ ಸ್ವಪಕ್ಷೀಯರು

ಜೆ.ಆರ್.ಗಿರೀಶ್
Published 25 ಮಾರ್ಚ್ 2019, 20:00 IST
Last Updated 25 ಮಾರ್ಚ್ 2019, 20:00 IST
ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಿ.ಎಸ್‌.ವೀರಯ್ಯ ಅವರು ಬಂಡಾಯ ಅಭ್ಯರ್ಥಿಯಾಗಿ ಕೋಲಾರದಲ್ಲಿ ಸೋಮವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಿ.ಎಸ್‌.ವೀರಯ್ಯ ಅವರು ಬಂಡಾಯ ಅಭ್ಯರ್ಥಿಯಾಗಿ ಕೋಲಾರದಲ್ಲಿ ಸೋಮವಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.   

ಕೋಲಾರ: ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಉಭಯ ಪಕ್ಷಗಳ ಆಂತರಿಕ ಬೇಗುದಿ ಬೀದಿಗೆ ಬಂದಿದೆ.

ಎದುರಾಳಿಗಳಿಗಿಂತ ಸ್ವಪಕ್ಷೀಯರೆ ಅಭ್ಯರ್ಥಿಗಳ ವಿರುದ್ಧ ತಿರುಗಿಬಿದ್ದಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಈಗ ಒಡೆದ ಮನೆಯಾಗಿವೆ. ಟಿಕೆಟ್‌ ಘೋಷಣೆಗೂ ಮುನ್ನವೇ ಎರಡೂ ಪಕ್ಷಗಳಲ್ಲಿ ಭಿನ್ನಮತ ತಾರಕಕ್ಕೇರಿತ್ತು. ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಸ್ಥಳೀಯ ಮುಖಂಡರು ಹಾಗೂ ಬೆಂಬಲಿಗರನ್ನು ದೆಹಲಿಗೆ ಕರೆದೊಯ್ದು ವರಿಷ್ಠರೆದುರು ಪರೇಡ್‌ ಮಾಡಿಸಿದ್ದರು.

ವರಿಷ್ಠರು ಭಿನ್ನಮತದ ಗಾಯಕ್ಕೆ ಮುಲಾಮು ಹಚ್ಚಿ, ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರನ್ನು ದೆಹಲಿಯಿಂದ ಸಾಗು ಹಾಕಿದ್ದರು. ಆದರೆ, ಟಿಕೆಟ್‌ ಘೋಷಣೆ ಬಳಿಕ ಸಣ್ಣಪುಟ್ಟದಾಗಿ ಹೊಗೆಯಾಡುತ್ತಿದ್ದ ಭಿನ್ನಮತದ ಬೆಂಕಿ ಇದೀಗ ಜ್ವಾಲಮುಖಿಯಂತೆ ಸ್ಫೋಟಗೊಂಡಿದೆ.

ADVERTISEMENT

ಕೈ ಪಾಳಯದಲ್ಲಿ ಬಣ ರಾಜಕೀಯ ಜೋರಾಗಿದ್ದು, ಮುನಿಯಪ್ಪರಿಗೆ ಟಿಕೆಟ್‌ ತಪ್ಪಿಸುವ ಪ್ರಯತ್ನ ಮಾಡಿದ್ದ ಎದುರಾಳಿ ಬಣ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಿಂದ ಅಂತರ ಕಾಯ್ದುಕೊಂಡಿತು. ಮತ್ತೊಂದೆಡೆ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿರುವ ಜೆಡಿಎಸ್‌ನ ಶಾಸಕರು ಹಾಗೂ ಹಲವು ಮುಖಂಡರು ಮುನಿಯಪ್ಪರ ವಿರೋಧಿ ಬಣದ ಜತೆ ಗುರುತಿಸಿಕೊಂಡು ದೂರವೇ ಉಳಿದರು.

ಕೈ ಕೊಟ್ಟ ಪಂಚ ಶಾಸಕರು

ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಕೈ ಪಾಳಯದ ಶಾಸಕರ ಪೈಕಿ ಕೆಜಿಎಫ್‌ ಕ್ಷೇತ್ರದ ಶಾಸಕಿ ಹಾಗೂ ಮುನಿಯಪ್ಪರ ಪುತ್ರಿ ಎಂ.ರೂಪಕಲಾ ಮಾತ್ರ ತಂದೆಯ ಬೆನ್ನಿಗೆ ನಿಂತಿದ್ದಾರೆ. ಜತೆಗೆ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ, ಚಿಂತಾಮಣಿ ಕ್ಷೇತ್ರದ ಜೆಡಿಎಸ್‌ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಹ ಮುನಿಯಪ್ಪಗೆ ಬೆಂಬಲ ಸೂಚಿಸಿದ್ದಾರೆ.

ಉಳಿದಂತೆ ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್‌ ಶಾಸಕರು ಮತ್ತು ಕೋಲಾರ ಕ್ಷೇತ್ರದ ಜೆಡಿಎಸ್‌ ಶಾಸಕರು ನಾಮಪತ್ರ ಸಲ್ಲಿಕೆಯತ್ತ ಸುಳಿಯಲಿಲ್ಲ. ಮೈತ್ರಿ ಧರ್ಮ ಪಾಲನೆ ಅನಿವಾರ್ಯತೆಗೆ ಕಟ್ಟುಬಿದ್ದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಉಮೇದುವಾರಿಕೆ ಸಲ್ಲಿಕೆ ವೇಳೆ ಮುನಿಯಪ್ಪರ ಜತೆಗಿದ್ದರು.

ವಾರದ ಹಿಂದೆ ಮುನಿಯಪ್ಪ ವಿರೋಧಿ ಬಣದ ಸಭೆಯಲ್ಲಿ ಕಾಣಿಸಿಕೊಂಡಿದ್ದ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಅಚ್ಚರಿ ಮೂಡಿಸಿದರು.

ಬಂಡಾಯದ ಬಿಸಿ ತುಪ್ಪ

ಕಮಲ ಪಾಳಯದ ಸ್ಥಿತಿ ಸಹ ಕೈ ಪಾಳಯಕ್ಕಿಂತ ಭಿನ್ನವಾಗಿಲ್ಲ. ಬಿಜೆಪಿಯಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ ವರಿಷ್ಠರಿಗೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.

ಬೆಂಬಲಿಗರೊಂದಿಗೆ ರಹಸ್ಯ ಸಭೆ ನಡೆಸಿದ ವೀರಯ್ಯ ಪಕ್ಷೇತರರಾಗಿ ಕಣಕ್ಕಿಳಿದಿರುವುದು ಕಮಲ ಪಾಳಯಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ನಿರ್ಮಲಾ ವೆಂಕಟೇಶ್‌ ಅವರು ವೀರಯ್ಯ ಜತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಿ ಅವಕಾಶ ವಂಚಿತರಾದ ಚಲವಾದಿ ನಾರಾಯಣಸ್ವಾಮಿ, ಬಾಲಾಜಿ ಚನ್ನಯ್ಯ, ಚಿ.ನಾ.ರಾಮು ತಟಸ್ಥರಾಗಿದ್ದಾರೆ. ವೀರಯ್ಯರ ಸ್ಪರ್ಧೆಯೊಂದಿಗೆ ಮತ ವಿಭಜನೆ ಆತಂಕ ಎದುರಾಗಿದ್ದು, ಕಮಲ ನಾಯಕರು ಅವರ ಮನವೊಲಿಕೆ ಕಸರತ್ತು ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.