ADVERTISEMENT

‘ಕಾಂಗ್ರೆಸ್‌ನ ಅಭ್ಯರ್ಥಿ ಒಪ್ಪಿಗೆಯಾಗದಿದ್ದರೆ ಜೆಡಿಯುನಿಂದ ಅಭ್ಯರ್ಥಿ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 11:57 IST
Last Updated 26 ಮಾರ್ಚ್ 2019, 11:57 IST

ಹುಬ್ಬಳ್ಳಿ: ಸಂಯುಕ್ತ ಜನತಾದಳವು (ಜೆಡಿಯು) ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನದ ಪಾಲುದಾರ ಪಕ್ಷವಾಗಿದೆ. ಹೀಗಾಗಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಆದರೆ, ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಜೆಡಿಯುನಿಂದಲೇ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲಗೌಡ ಕಮತರ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತ್ಯತೀತ ಅಭ್ಯರ್ಥಿಯನ್ನು ಬೆಂಬಲಿಸಲು ನಾವು ಬಯಸಿದ್ದೇವೆ. ಇನ್ನೂ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿಲ್ಲ. ಘೋಷಣೆಯಾದ ಬಳಿಕ ಪ‍ಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಅವರನ್ನು ಭೇಟಿಯಾಗಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಸಿಪಿಐ, ಸಿಪಿಐಂ ಪಕ್ಷಗಳು ಹಾಗೂ ರೈತ ಸಂಘಟನೆಗಳು ಒಟ್ಟಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಅವರನ್ನು ಬೆಂಬಲಿಸುತ್ತೇವೆ ಎಂದರು.

‘ಹಲವು ವರ್ಷಗಳಿಂದ ಇಲ್ಲಿ ಜೆಡಿಯು ಅಭ್ಯರ್ಥಿ ಇಲ್ಲ. ಹೀಗಾಗಿ, ಪಕ್ಷದ ವಕ್ತಾರ ಎಸ್.ಎನ್‌. ಹೈಬತ್ತಿ ಅವರ ಹೆಸರನ್ನು ಪಕ್ಷದಿಂದ ಶಿಫಾರಸು ಮಾಡಲಾಗಿದೆ. ನಾಡಗೌಡರು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

ADVERTISEMENT

ಹೈಬತ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಿರೋಜಖಾನ್‌ ಹವಾಲ್ದಾರ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.