ಬೆಂಗಳೂರು: ರಾಜ್ಯ ಬಿಜೆಪಿಯ ಪದಾಧಿಕಾರಿಗಳು ಮತ್ತು ನಾಯಕರ ಕಾರ್ಯವೈಖರಿ ಬಗ್ಗೆ ಅವರದೇ ಪಕ್ಷದ ಸಂಸದ ಡಿ.ಬಿ.ಚಂದ್ರೇಗೌಡ ಆಕ್ಷೇಪ ಎತ್ತಿದ್ದು, ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ.
‘ಇದೊಂದು ವೈಯಕ್ತಿಕ ಪತ್ರ’ ಎಂದು ಪತ್ರದ ಮೇಲೆ ಉಲ್ಲೇಖಿಸಿದ್ದು, ಅದರಲ್ಲಿ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಪತ್ರದ ಪ್ರತಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ಮುಖಂಡರಾದ ಬಿ.ಎಸ್.ಯಡಿಯೂರಪ್ಪ ಅವರಿಗೂ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.
‘ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಬಂದರೂ ನಮಗೆ ತಿಳಿಸುವುದಿಲ್ಲ. ಮೊನ್ನೆ ಯಶವಂತ ಸಿನ್ಹಾ ಬಂದ ವಿಷಯ ಕೂಡ ತಿಳಿಸಲಿಲ್ಲ. ಒಬ್ಬ ಸಂಸದನ ಪರಿಸ್ಥಿತಿ ಈ ರೀತಿ ಆದರೆ ಹೇಗೆ’ ಎಂದು ಪತ್ರದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
‘ನಾನೊಬ್ಬ ಹಾಲಿ ಸಂಸದ. ನನಗೆ ತಿಳಿಸದೆ ನಾನು ಪ್ರತಿನಿಧಿಸಿರುವ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಬೇರೊಬ್ಬರನ್ನು ಅಭ್ಯರ್ಥಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ನಿಜಕ್ಕೂ ಅಗೌರವ ಸೂಚಿಸುವ ಪ್ರವೃತ್ತಿ’ ಎಂದು ಆಕ್ಷೇಪಿಸಿದ್ದಾರೆ ಎಂದು ಗೊತ್ತಾಗಿದೆ.
ಪಕ್ಷ ಕೊಡುವ ಜಾಹೀರಾತುಗಳಲ್ಲಿ ಸಂಸದರ ಹೆಸರು ಹಾಕದಿರುವುದು ಕೂಡ ಹೇಸಿಗೆ ತರುವ ವಿಚಾರ. ಈ ಬಗ್ಗೆ ಗಮನಹರಿಸುವ ಅಗತ್ಯ ಇದೆ ಎಂದು ಅವರು ವರಿಷ್ಠರಲ್ಲಿ ಕೋರಿದ್ದಾರೆ.
ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಗೌಡರು ನಿರಾಕರಿಸಿದರು.
ಡಿವಿಎಸ್ ಭೇಟಿ: ಈ ನಡುವೆ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ಚಂದ್ರೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
‘ನನಗೆ ಪಕ್ಷ ಟಿಕೆಟ್ ನೀಡುತ್ತಿದ್ದು, ತಮ್ಮ ಸಹಕಾರ ಬೇಕು’ ಎಂದು ಸದಾನಂದಗೌಡ ಅವರು ಚಂದ್ರೇಗೌಡ ಅವರಲ್ಲಿ ಕೋರಿದರು ಎಂದು ಗೊತ್ತಾಗಿದೆ. ಇದಕ್ಕೆ ಚಂದ್ರೇಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.