ADVERTISEMENT

ನಟಿ ಭವ್ಯಾ, ನಟ ಮದನ್‌ ಕಾಂಗ್ರೆಸ್‌ಗೆ

ರಘು ಆಚಾರ್, ‘ಮುಖ್ಯಮಂತ್ರಿ’ ಚಂದ್ರು ಕೂಡ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 19:30 IST
Last Updated 22 ಮಾರ್ಚ್ 2014, 19:30 IST

ಬೆಂಗಳೂರು: ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ರಘು ಆಚಾರ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಚಿತ್ರನಟ ಮದನ್‌ ಪಟೇಲ್‌ ಮತ್ತು ಚಿತ್ರನಟಿ ಭವ್ಯಾ ಶನಿವಾರ ಕಾಂಗ್ರೆಸ್‌ ಪಕ್ಷ ಸೇರಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಪಕ್ಷದ ಬಾವುಟ ನೀಡುವ ಮೂಲಕ ನಾಲ್ವರನ್ನೂ ಕಾಂಗ್ರೆಸ್‌ಗೆ ಬರ­ಮಾಡಿ­ಕೊಂಡರು. ಮೈಸೂರಿನವರಾದ ರಘು ಆಚಾರ್‌ ಈ ಮೊದಲು ಕಾಂಗ್ರೆಸ್‌ನಲ್ಲೇ ಇದ್ದರು. ಆದರೆ, ವಿಧಾನ ಪರಿಷತ್ತಿನ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಟಿಕೆಟ್‌ ಕೈತಪ್ಪಿ­ದ್ದರಿಂದ ಮುನಿಸಿಕೊಂಡು ಹೊರಹೋಗಿದ್ದರು. ಅಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.

ಕಾಂಗ್ರೆಸ್‌ ಸೇರುತ್ತಿರುವ ವಿಧಾನ ಪರಿಷತ್ತಿನ ಹಾಲಿ ಸದಸ್ಯರಲ್ಲಿ ರಘು ಎರಡನೇಯವರು. ಕೆಜೆಪಿ ಜೊತೆ ಗುರುತಿಸಿಕೊಂಡಿದ್ದ ಎಂ.ಡಿ.ಲಕ್ಷ್ಮೀನಾರಾಯಣ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ಸೇರಿದ್ದರು.

ಪತ್ನಿ ಬಿಜೆಪಿಯಲ್ಲಿ: ‘ಮುಖ್ಯಮಂತ್ರಿ’ ಚಂದ್ರು ಅವರು ದೀರ್ಘ ಕಾಲದಿಂದ ಬಿಜೆಪಿಯಲ್ಲಿದ್ದರು. ಆ ಪಕ್ಷದಿಂದಲೇ ವಿಧಾನ ಪರಿಷತ್‌ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನೂ ಅವರಿಗೆ ನೀಡಲಾಗಿತ್ತು.

ಬಿಜೆಪಿ ಅವಧಿಯಲ್ಲಿ ನಿಗಮ, ಮಂಡಳಿಗಳಿಗೆ ನೇಮಕ­ಗೊಂಡಿ­ದ್ದವರನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸ್ಥಾನದಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ, ಚಂದ್ರು ಅವರನ್ನು ಪ್ರಾಧಿಕಾರದ ಅಧ್ಯಕ್ಷ ಸ್ಥಾನದಲ್ಲೇ ಮುಂದು­ವರಿಸಲಾಗಿತ್ತು. ಆಗಲೇ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ವಿಶೆಷ ಎಂದರೆ ಅವರ ಪತ್ನಿ ಬಿಜೆಪಿಯ ಪದಾಧಿಕಾರಿ­ಯಾಗೇ ಮುಂದುವರಿದಿದ್ದಾರೆ. ಬಿ.ಎಸ್‌.­ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಸ್ಥಾಪಿಸಿದಾಗ ಅವರೊಂದಿಗೆ ಗುರುತಿ­ಸಿಕೊಂಡಿದ್ದ ಮದನ್‌ ಪಟೇಲ್‌, ಕೆಲವೇ ದಿನಗಳಲ್ಲಿ ಬಿ.ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷಕ್ಕೆ ಜಿಗಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.