ADVERTISEMENT

ನಿವೃತ್ತ ಅಧಿಕಾರಿ ಕೆ.ಶಿವರಾಂ ಜೆಡಿಎಸ್‌ನಿಂದ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2014, 19:30 IST
Last Updated 26 ಮಾರ್ಚ್ 2014, 19:30 IST
ನಿವೃತ್ತ ಅಧಿಕಾರಿ ಕೆ.ಶಿವರಾಂ ಜೆಡಿಎಸ್‌ನಿಂದ ಕಣಕ್ಕೆ
ನಿವೃತ್ತ ಅಧಿಕಾರಿ ಕೆ.ಶಿವರಾಂ ಜೆಡಿಎಸ್‌ನಿಂದ ಕಣಕ್ಕೆ   

ವಿಜಾಪುರ: ಅಚ್ಚರಿಯ ಬೆಳವಣಿಗೆ­ಯಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ, ರಾಜ್ಯ ಛಲವಾದಿ ಮಹಾಸಭಾ ಅಧ್ಯಕ್ಷ ಕೆ.ಶಿವರಾಂ  ವಿಜಾಪುರ ಮೀಸಲು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.

ವಿಜಾಪುರ ಕ್ಷೇತ್ರಕ್ಕೆ ಜೆಡಿಎಸ್ ಸ್ಥಳೀಯ ಸಿದ್ದು ಕಾಮತ್‌ ಹೆಸರನ್ನು ಘೋಷಿಸಿತ್ತು. ಬುಧವಾರ ಬೆಳಿಗ್ಗೆ 10.30ಕ್ಕೆ ನಾಮಪತ್ರ ಸಲ್ಲಿಸಲು ಅವರು ಸಿದ್ಧತೆಯನ್ನೂ ಮಾಡಿಕೊಂಡಿ­ದ್ದರು. ಆದರೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮನಗೂಳಿ ಅವರು ತಮ್ಮ ಬಳಿ ಇಟ್ಟುಕೊಂಡಿದ್ದ ‘ಬಿ’ ಫಾರ್ಮ್‌ ನೀಡಲೇ ಇಲ್ಲ.

ಮತ್ತೊಬ್ಬ ಆಕಾಂಕ್ಷಿ ಕೋಲಾರದ ನಿವೃತ್ತ ಕೆ.ಎ.ಎಸ್‌. ಅಧಿಕಾರಿ ಚಿಕ್ಕವೆಂಕಟಪ್ಪ ಅವರೂ ನಾಮಪತ್ರ ಸಲ್ಲಿಸಲು ಅಗತ್ಯ ದಾಖಲೆಗಳೊಂದಿಗೆ ಜೆಡಿಎಸ್‌ ಕಚೇರಿಯಲ್ಲಿ ಬೀಡು ಬಿಟ್ಟಿದ್ದರು. ಬೆಂಗಳೂರಿನಿಂದ ಮಧ್ಯಾಹ್ನ ಜೆಡಿಎಸ್‌ ಕಚೇರಿಗೆ ಆಗಮಿಸಿದ ಕೆ.ಶಿವರಾಂ, ‘ಬಿ’ ಫಾರ್ಮ್‌ ಪಡೆದು­ಕೊಂಡು ಪಕ್ಷದ ಜಿಲ್ಲಾ ಘಟಕದ ಮುಖಂಡ­ರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

‘ಶಿವರಾಂ ಅವರು ತರಾತುರಿಯಲ್ಲಿ ದಾಖಲೆ­ಗಳನ್ನು ಸಿದ್ಧಪಡಿಸಿ­ಕೊಂಡಿ­ದ್ದರಿಂದ  ಮುನ್ನೆಚ್ಚರಿಕೆಯ ಕ್ರಮವಾಗಿ ‘ಬಿ’ ಫಾರ್ಮ್‌ನಲ್ಲಿ ಶಿವರಾಂ ಮತ್ತು ಚಿಕ್ಕವೆಂಕಟಪ್ಪ ಇಬ್ಬರ ಹೆಸರನ್ನೂ ಬರೆದಿದ್ದೇವೆ. ಅವರಿಬ್ಬರೂ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಶಿವರಾಂ ಅವರ ನಾಮಪತ್ರ ಸ್ವೀಕೃತವಾದರೆ ಚಿಕ್ಕವೆಂಕಟಪ್ಪ ತಮ್ಮ ನಾಮಪತ್ರ ವಾಪಸ್ಸು ಪಡೆಯಲಿದ್ದಾರೆ’ ಎಂದು ಪಕ್ಷದ ಮುಖಂಡರು ಹೇಳಿದರು.

‘ವಿಜಾಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ದೇವೇಗೌಡರು ಮತ್ತು ಸ್ಥಳೀಯ ಮುಖಂಡರು ವಿನಂತಿಸುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ಸ್ಪರ್ಧಿ­ಸು­ತ್ತಿದ್ದೇನೆ. ವಿಜಾಪುರ ನನ್ನ ತವರು ಮನೆ ಇದ್ದಂತೆ. ನಾನು ಇಲ್ಲಿ ಉಪ ವಿಭಾಗಾಧಿಕಾರಿ ಮತ್ತು  ಜಿಲ್ಲಾ ಪಂಚಾಯಿತಿ ಮುಖ್ಯಕಾ­ರ್ಯನಿ­ರ್ವಾಹಕ ಅಧಿಕಾರಿ­ಯಾಗಿ ಮಾಡಿದ ಸೇವೆಯನ್ನು ಜನ ಇನ್ನೂ ಮರೆತಿಲ್ಲ’ ಎಂದು ಶಿವರಾಂ ಹೇಳಿದರು.

‘ಬಡವರ ಸೇವೆ ಮಾಡುವುದೇ ನನ್ನ ಗುರಿ. ಅದಕ್ಕೆ ಯಾವ ಪಕ್ಷವಾದರೆ ಏನಂತೆ?’ ಎಂದು ಚಿತ್ರದುರ್ಗ­ದಿಂದ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದರ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.