ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 14 ರಿಂದ 16, ಕಾಂಗ್ರೆಸ್ 11 ರಿಂದ 13 ಮತ್ತು ಜೆಡಿಎಸ್ 1ರಿಂದ 2 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯನ್ನು ‘ಪ್ರಜಾವಾಣಿ’ ನಡೆಸಿದ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ತೆರೆದಿಟ್ಟಿದೆ.
‘ಪ್ರಜಾವಾಣಿ’ಯ 300ಕ್ಕೂ ಹೆಚ್ಚು ಅರೆಕಾಲಿಕ ಮತ್ತು ಪೂರ್ಣಾವಧಿ ವರದಿಗಾರರು ಎಲ್ಲಾ ಲೋಕಸಭಾ ಕ್ಷೇತ್ರಗಳ ಆಯ್ದ ಮತಗಟ್ಟೆಗಳಲ್ಲಿ ನಡೆಸಿದ ಸಮೀಕ್ಷೆ ಒಟ್ಟು 9,218 ಮತದಾರರನ್ನು ಒಳಗೊಂಡಿದೆ.
ಒಟ್ಟು ಮತಗಳ ಶೇ 42.4ರಷ್ಟನ್ನು ಗಳಿಸಿರುವ ಕಾಂಗ್ರೆಸ್ ಮತ ಗಳಿಕೆಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಗೆಲ್ಲುವ ಸ್ಥಾನಗಳ ವಿಚಾರಕ್ಕೆ ಬಂದಾಗ ಅದು ಹಿಂದೆ ಬಿದ್ದಿದೆ. ಶೇ 41.8 ಮತಗಳನ್ನು ಗಳಿಸಿರುವ ಬಿಜೆಪಿ ಈ ವಿಷಯದಲ್ಲಿ ಮುಂದಿದೆ. ಶೇಕಡಾ 12.3ರಷ್ಟು ಮತಗಳನ್ನು ಗಳಿಸಿರುವ ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಎಎಪಿಗೆ ರಾಜ್ಯದಲ್ಲಿ ಶೇ 1.3ರಷ್ಟು ಮತಗಳು ಮಾತ್ರ ದೊರೆತಿವೆ. ಪಕ್ಷೇತರರೂ ಸೇರಿದಂತೆ ಇತರ ಎಲ್ಲಾ ರಾಜಕೀಯ ಪಕ್ಷಗಳಿಗೆ ದೊರೆತಿರುವ ಮತಗಳ ಪ್ರಮಾಣ ಶೇ 2.
ಪ್ರದೇಶವಾರು ಮತ ಗಳಿಕೆ ಪ್ರಮಾಣವನ್ನು ಪರಿಗಣಿಸಿದರೆ ಬಿಜೆಪಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಕ್ಷೇತ್ರಗಳು (ಶೇ 49.3), ಕರಾವಳಿ ಕರ್ನಾಟಕ (ಶೇ 50.4) ಮತ್ತು ಮುಂಬೈ ಕರ್ನಾಟಕಗಳಲ್ಲಿ (ಶೇ 48.1) ಹೆಚ್ಚು ಮತ ಗಳಿಸಿದೆ.
ಕಾಂಗ್ರೆಸ್ ಹೈದರಾಬಾದ್ ಕರ್ನಾಟಕ (ಶೇ 48.4) ಮತ್ತು ಹಳೆ ಮೈಸೂರು ಪ್ರಾಂತ್ಯಗಳಲ್ಲಿ (ಶೇ 39) ಹೆಚ್ಚು ಮತಗಳನ್ನು ಗಳಿಸಿದೆ. ಎಎಪಿಗೆ ಅತಿ ಹೆಚ್ಚು ಮತಗಳು (ಶೇ 2.8) ದೊರೆತಿರುವುದು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮೂರು ಕ್ಷೇತ್ರಗಳಲ್ಲಿ. ಇದರ ನಂತರದ ಸ್ಥಾನವನ್ನು ಕ್ರಮವಾಗಿ ಕರಾವಳಿ (ಶೇ 1.8) ಮತ್ತು ಹೈದರಾಬಾದ್ ಕರ್ನಾಟಕದ್ದಾಗಿದೆ (1.3). ಜೆಡಿಎಸ್ ಅತಿ ಹೆಚ್ಚು ಮತ ಗಳಿಸಿರುವುದು ಅದರ ಭದ್ರ ನೆಲೆಯಾದ ಹಳೆಯ ಮೈಸೂರು (24.9) ಭಾಗದಲ್ಲಿ. ಬೆಂಗಳೂರು ಮಹಾನಗರ ಪಾಲಿಕೆಯ ಪ್ರದೇಶದಲ್ಲಿ ಶೇ 9.4 ಮತಗಳನ್ನು ಪಡೆದಿರುವುದನ್ನು ಹೊರತು ಪಡಿಸಿದರೆ ಬೇರೆಲ್ಲೂ ಜೆಡಿಎಸ್ ಮತ ಗಳಿಕೆಯ ಪ್ರಮಾಣ ಶೇ 4.4ನ್ನು ದಾಟಿಲ್ಲ.
2009ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಾಗ ಬಿಜೆಪಿ 19 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಆರು ಸ್ಥಾನಗಳನ್ನೂ ಮತ್ತು ಜೆಡಿಎಸ್ ಮೂರು ಸ್ಥಾನಗಳನ್ನೂ ಗೆದ್ದುಕೊಂಡಿದ್ದವು. ನಂತರ ನಡೆದ ಉಪಚುನಾವಣೆಯಲ್ಲಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಕಾಂಗ್ರೆಸ್ಸಿಗೆ ಸೋತಿತ್ತು. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದಿದ್ದ ಜೆ.ಡಿ.ಎಸ್ ಕೂಡ ವಿಧಾನಸಭಾ ಚುನಾವಣೆ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈಯಲ್ಲಿ ಸೋಲು ಅನುಭವಿಸಿತ್ತು.
15ನೇ ಲೋಕಸಭೆಯ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಬಿಜೆಪಿಯ 17 ಲೋಕಸಭಾ ಸದಸ್ಯರಿದ್ದರೆ ಕಾಂಗ್ರೆಸ್‌ನ ಒಂಬತ್ತು ಮಂದಿ ಮತ್ತು ಜೆಡಿಎಸ್‌ನ ಇಬ್ಬರು ಲೋಕಸಭಾ ಸದಸ್ಯರಿದ್ದರು. ‘ಪ್ರಜಾವಾಣಿ’ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳು ಸೂಚಿಸುತ್ತಿರುವಂತೆ ಕಾಂಗ್ರೆಸ್ ನಿರೀಕ್ಷೆಯಷ್ಟಲ್ಲದಿದ್ದರೂ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನವನ್ನು ತೋರಿದೆ. ಜೆಡಿಎಸ್ ಮತ್ತು ಬಿಜೆಪಿಗಳೆರಡೂ ತಮ್ಮ ಬಲವನ್ನು ಕುಂದಿಸಿಕೊಂಡಿವೆ.
ಕಾಂಗ್ರೆಸ್‌ನ ಮತ ಗಳಿಕೆ ಪ್ರಮಾಣದಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ ಆರರಷ್ಟು ಹೆಚ್ಚಳ ಕಂಡುಬಂದಿದೆ. ಈ ಮತಗಳನ್ನು ಸ್ಥಾನಗಳಾಗಿ ಪರಿವರ್ತಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. 2009ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ ಮತಗಳ ಪ್ರಮಾಣ ಶೇ 37.65. ಈ ಸಂದರ್ಭದಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಶೇ 41.63.
2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಳಿಸಿದ ಮತಗಳ ಪ್ರಮಾಣ ಶೇ 36.59ಕ್ಕೆ ಇಳಿದಿತ್ತು. ಆದರೆ ಅದರ ಸ್ಥಾನ ಗಳಿಕೆಯ ಪ್ರಮಾಣ ಮಾತ್ರ ಹೆಚ್ಚಾಗಿತ್ತು. ಆ ಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಮತಗಳು ಶೇ 19.89ರಷ್ಟು ಮಾತ್ರ.
‘ಪ್ರಜಾವಾಣಿ’ ಮತಗಟ್ಟೆ ಸಮೀಕ್ಷೆ ಸೂಚಿಸುತ್ತಿರುವ ಅಂಕಿ–ಅಂಶಗಳನ್ನು ನೋಡಿದರೆ ಬಿಜೆಪಿಯ ಮತ ಗಳಿಕೆಯ ಪ್ರಮಾಣ ಈ ಬಾರಿ ಶೇ 41.8ಕ್ಕೆ ಏರಿದೆ.
ಇದು 2009ರಲ್ಲಿ ಗಳಿಸಿದ ಮತಗಳ ಪ್ರಮಾಣಕ್ಕಿಂತ ಹೆಚ್ಚು. 2013ರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳ ದುಪ್ಪಟ್ಟಿಗಿಂತ ಕೊಂಚ ಹೆಚ್ಚು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕೂಡಾ ತನ್ನ ಸ್ಥಿತಿಯನ್ನು ಉತ್ತಮ ಪಡಿಸಿಕೊಂಡು ಮತ ಗಳಿಕೆಯ ಪ್ರಮಾಣವನ್ನು ಶೇ 42.4ಕ್ಕೆ ಏರಿಸಿಕೊಂಡಿದೆ. ಇದು ವಿಧಾನಸಭಾ ಚುನಾವಣೆಗಳಲ್ಲಿ ಗಳಿಸಿದ ಮತಗಳಿಗಿಂತ ಹೆಚ್ಚು.
ಜೆಡಿಎಸ್ 2009ರ ಚುನಾವಣೆಗಳಲ್ಲಿ ಗಳಿಸಿದ ಒಟ್ಟು ಮತಗಳ ಪ್ರಮಾಣ ಶೇ 13.57. 2013ರ ಲೋಕಸಭಾ ಚುನಾವಣೆಯಲ್ಲಿ ಈ ಸ್ಥಿತಿ ಇನ್ನಷ್ಟು ಉತ್ತಮಗೊಂಡು ಅದು ಶೇ 20.19ರಷ್ಟು ಮತಗಳನ್ನು ಗಳಿಸಿತ್ತು. ‘ಪ್ರಜಾವಾಣಿ’ಯ ಮತಗಟ್ಟೆ ಸಮೀಕ್ಷೆಗಳು ಸೂಚಿಸುತ್ತಿರುವಂತೆ ಶೇ 12.3ರಷ್ಟು ಮತ ಗಳಿಸಿದೆ.
ಅಂದರೆ ಹಿಂದಿನ ಲೋಕಸಭಾ ಚುನಾವಣೆ ಮತ್ತು ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಗಳಿಸಿದ ಮತಗಳನ್ನೂ ಅದಕ್ಕೆ ಉಳಿಸಿಕೊಳ್ಳಲು ಆಗಿಲ್ಲ. ಈ ಸ್ಥಿತಿಯೇ ಅದರ ಸ್ಥಾನ ಗಳಿಕೆಯ ಪ್ರಮಾಣದ ಮೇಲೂ ಪರಿಣಾಮ ಬೀರಿದೆ ಎನ್ನಬಹುದು.
ಆಮ್ ಆದ್ಮಿ ಪಾರ್ಟಿ ಕರ್ನಾಟಕದ ಮಟ್ಟಿಗೆ ನಗರದ ಪಕ್ಷ ಎಂಬುದು ಸಾಬೀತಾಗಿದೆ. ಅದಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಮತಗಳು ದೊರೆತಿರುವುದು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮೂರು ಲೋಕಸಭಾ ಕ್ಷೇತ್ರಗಳಲ್ಲಿ. ಇಲ್ಲಿ ಅದಕ್ಕೆ ಶೆೇಕಡಾ 1.8ರಷ್ಟು ಮತಗಳು ದೊರೆತಿವೆ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ‘ನೋಟಾ’ ಅಥವಾ ಮೇಲಿನ ಯಾರೂ ಅರ್ಹರಲ್ಲ ಎಂಬ ಆಯ್ಕೆಯೊಂದನ್ನು ನೀಡಿತ್ತು. ಮತಗಟ್ಟೆ ಸಮೀಕ್ಷೆ ಹೇಳುತ್ತಿರುವಂತೆ ಇದನ್ನು ಬಳಸಿಕೊಂಡವರ ಪ್ರಮಾಣ ಶೇ 0.1 ಮಾತ್ರ. ಈ ಆಯ್ಕೆಯ ಕುರಿತಂತೆ ಮತದಾರರಲ್ಲಿ ಹೆಚ್ಚಿನ ಅರಿವು ಇಲ್ಲದೇ ಇರುವುದು ಹಾಗೂ ಈ ಆಯ್ಕೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವಿನಿಂದ ಇದರ ಪ್ರಮಾಣ ಕಡಿಮೆಯಾಗಿದೆ ಎಂದು ಊಹಿಸಬಹುದು.
ಇನ್ನಷ್ಟು ಸುದ್ದಿಗಳು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.