ಹರಿಹರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಬಿ.ಪಿ. ಹರೀಶ್ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ಮಂಗಳವಾರ ಮುಹೂರ್ತ ನಿಗದಿಯಾಗಿದೆ.
ನಗರಸಭೆ ಸದಸ್ಯ ಸೈಯದ್ ರೆಹಮಾನ್ ಅವರ ಕಚೇರಿಯಲ್ಲಿ ಭಾನುವಾರ ಬಿ.ಪಿ.ಹರೀಶ್ ಕರೆದಿದ್ದ ಆಪ್ತರ ಸಭೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಆರಂಭದಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಅವರ ಆಪ್ತರು ವಿರೋಧಿಸಿದರು. ಆದರೆ ನಂತರ ಹರೀಶ್ ಮಾತಿಗೆ ಮಣಿದು ಅರೆಮನಸ್ಸಿನಿಂದ ಒಪ್ಪಿದರು.
ರಾಜ್ಯ ಬಿಜೆಪಿ ನಾಯಕರ ನಿರ್ಲಕ್ಷ್ಯ ಹಾಗೂ ಬೆಂಬಲಿಗರಿಗೆ ತಾಲ್ಲೂಕು ಬಿಜೆಪಿ ಮುಖಂಡರು ತೋರಿದ ಅಗೌರವದಿಂದ ಬೇಸರಗೊಂಡು ಹರೀಶ್ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಅವರ ಬೆಂಬಲಿಗರೊಬ್ಬರು ತಿಳಿಸಿದರು.
ಸಭೆಯ ನಂತರ ಸ್ಥಳಕ್ಕೆ, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಪತ್ನಿ ಪ್ರಭಾ, ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಬೆಣ್ಣಿಹಳ್ಳಿ ಹಾಲೇಶಪ್ಪ, ಎಂ.ನಾಗೇಂದ್ರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಡಿ.ಕುಮಾರ್, ಎಚ್.ಎಚ್.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಸಿಗ್ಬತ್ಉಲ್ಲಾ ಮೊದಲಾದ ಕಾಂಗ್ರೆಸ್ ಮುಖಂಡರು ಆಗಮಿಸಿ ಹರೀಶ್‌ಗೆ ಶುಭ ಹಾರೈಸಿ, ಕಾಂಗ್ರೆಸ್‌ಗೆ ಸ್ವಾಗತಿಸಿದ್ದು ಅವರ ಸೇರ್ಪಡೆಯನ್ನು ಖಚಿತಗೊಳಿಸಿತು.
ಹರೀಶ್ ನಡೆ ಲೋಕಸಭೆ ಚುನಾವಣೆಯಲ್ಲಿ ಯಾವ ಪರಿಣಾಮ ಬೀರಬಹುದು ಎನ್ನುವುದು ಸದ್ಯ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.