ADVERTISEMENT

‘ಅಕ್ಷರ ದೋಸೆ’ಯಲ್ಲಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 19:30 IST
Last Updated 27 ಮಾರ್ಚ್ 2014, 19:30 IST
ರಾಮನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣ­ದಲ್ಲಿ ಗುರುವಾರ ಮಧ್ಯಾಹ್ನ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ‘ಅಕ್ಷರ ದೋಸಾ’ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಎಂ.ವಿ.ವೆಂಕಟೇಶ್‌ ಹೆಂಚಿನ ಮೇಲಿನ ದೋಸೆ ತಿರುವಿ ಹಾಕುವ ಮೂಲಕ ಚಾಲನೆ ನೀಡಿದರು
ರಾಮನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಆವರಣ­ದಲ್ಲಿ ಗುರುವಾರ ಮಧ್ಯಾಹ್ನ ಮತದಾನ ಜಾಗೃತಿ ಅಂಗವಾಗಿ ಹಮ್ಮಿಕೊಂಡಿದ್ದ ‘ಅಕ್ಷರ ದೋಸಾ’ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಎಂ.ವಿ.ವೆಂಕಟೇಶ್‌ ಹೆಂಚಿನ ಮೇಲಿನ ದೋಸೆ ತಿರುವಿ ಹಾಕುವ ಮೂಲಕ ಚಾಲನೆ ನೀಡಿದರು   

ರಾಮನಗರ: ‘ನನ್ನ ಮತ ನನ್ನ ಹಕ್ಕು’, ‘ಎಲ್ಲರೂ ಮತದಾನ ಮಾಡಿ ಪ್ರಜಾ­ಪ್ರಭುತ್ವ ಭದ್ರಪಡಿಸಿ’... ಇತ್ಯಾದಿ ಘೋಷಣೆ­ಗಳು ದೋಸೆಯ ಮೂಲಕ ಮೂಡಿ ಬರುತ್ತಿದ್ದವು... ಇದನ್ನು ಕೆಲವರು ಆಶ್ಚರ್ಯದಿಂದ ನೋಡುತ್ತಿ­ದ್ದರೆ, ಮತ್ತೆ ಕೆಲವರು ದೋಸೆ ತಿನ್ನಲು ಮುಗಿಬೀಳುತ್ತಿದ್ದರು. ಇದು ರಾಮನಗರದ ಕೆಎಸ್‌ಆರ್‌­ಟಿಸಿ ಬಸ್‌ ನಿಲ್ದಾಣದ ಆವರಣದಲ್ಲಿ ಗುರುವಾರ ಮಧ್ಯಾಹ್ನ ಕಂಡು ಬಂದ ದೃಶ್ಯ. ಸ್ಥಳದಲ್ಲಿ ನೆರೆದಿದ್ದ ಬಹುತೇಕರ ಬಾಯಲ್ಲಿ ದೋಸೆಯದೇ ಮಾತು.

ಬಸ್‌ ನಿಲ್ದಾಣದ ಆವರಣದ ‘ಮೊಬೈಲ್‌ ಕ್ಯಾಂಟಿನ್‌’­ನಲ್ಲಿ ದೋಸೆ­ಗಳನ್ನು ಹಾಕಿ, ಸಾರ್ವಜನಿಕರಿಗೆ ನೀಡ­ಲಾಗು­ತ್ತಿತ್ತು. ಅಕ್ಷರಗಳ ರೂಪದಲ್ಲಿ ದೋಸೆಗಳನ್ನು ಮೂಡಿಸುತ್ತಿ­ದ್ದು­ದನ್ನು ಕಂಡು ಸಾರ್ವಜನಿಕರು ಮತ್ತು ಪ್ರಯಾಣಿಕರು ಕುತೂಹಲದಿಂದ ಈ ಅಪರೂಪದ ದೋಸೆಗಳನ್ನು ಬೆರಗುಗಣ್ಣಿಂದ ನೋಡುತ್ತಿದ್ದರು.

ಇದು ಮತದಾರರಲ್ಲಿ ಮತದಾನದ ಮಹತ್ವ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ‘ಸ್ವೀಪ್’ ಸಮಿತಿ, ಜಿಲ್ಲಾ ಪಂಚಾಯಿತಿ, ಅಕ್ಷರ ದಾಸೋಹ ವಿಭಾಗವು ಜಂಟಿಯಾಗಿ ಹಮ್ಮಿ­ಕೊಂಡಿದ್ದ ವಿನೂತನ ‘ಅಕ್ಷರ­ದೋಸಾ’ ಎಂಬ ಮತದಾನ ಜಾಗೃತಿ ಕಾರ್ಯ­ಕ್ರಮ.

ಅಂಗನವಾಡಿ ಮತ್ತು ಅಕ್ಷರ ದಾಸೋಹ ವಿಭಾಗದ ಮಹಿಳೆಯರು ಅಕ್ಷರ ರೂಪದಲ್ಲಿ ದೋಸೆಗಳನ್ನು ಹುಯ್ಯುತ್ತಿ­ದ್ದರು. ಅಕ್ಷರ ರೂಪದಲ್ಲಿ ಮೂಡುತ್ತಿದ್ದ ದೋಸೆಗಳನ್ನು ಕೆಲವರು ಆಸಕ್ತಿಯಿಂದ ಓದುತ್ತಿದ್ದರೆ, ಇನ್ನೂ ಕೆಲವರು ಅವನ್ನು ಸವಿಯಲು ತುದಿ­ಗಾಲಲ್ಲಿ ನಿಂತಿದ್ದರು. ಕೆಲವರಂತೂ ಅರೇ! ದೋಸೆ ರೂಪದಲ್ಲಿ ಮತದಾನ ಜಾಗೃತಿ ಮಾಡಬಹುದಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು.

‘ಅಕ್ಷರ ದೋಸಾ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಜಿ.ಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ.ಎಂ.ವಿ.ವೆಂಕಟೇಶ್‌ ಮಾತ­ನಾಡಿ,  ಲೋಕಸಭಾ ಸಾರ್ವತ್ರಿಕ ಚುನಾ­­ವಣೆಯಲ್ಲಿ ಅರ್ಹರೆಲ್ಲರೂ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ­ಯನ್ನು ಎತ್ತಿ ಹಿಡಿಯಬೇಕು ಎಂದರು.

ಒಂದು ಮತದಿಂದ ಏನಾಗುವುದು ಎಂಬ ನಿರ್ಲಕ್ಷ್ಯ ನಗರ ಪ್ರದೇಶದ ಸುಶಿಕ್ಷಿತ ಮತದಾರರಲ್ಲಿದ್ದು, ಇದು ಉತ್ತಮ ಬೆಳವಣಿಗೆಯಲ್ಲ. ಒಂದು ಮತದಿಂದ ಒಬ್ಬ ವ್ಯಕ್ತಿ ಸೋಲಬಹುದು, ಗೆಲ್ಲಲೂಬಹುದು. ಶೇ 100 ಮತದಾನವಾದಲ್ಲಿ ದೇಶದ ಅಭಿವೃದ್ಧಿ ಸಾಧ್ಯ. ಉತ್ತಮ ಭವಿಷ್ಯ ಉತ್ತಮ ಆಡಳಿತಕ್ಕಾಗಿ ಎಲ್ಲರೂ ಮತದಾನ ಮಾಡಬೇಕೆಂದು ಅವರು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಎಸ್.ವೈ ಬಸವ­ರಾಜಪ್ಪ ಮಾತನಾಡಿ, ಮತದಾನದ ಜಾಗೃತಿ ಕಾರ್ಯ­ಕ್ರಮಗಳನ್ನು ಜಿಲ್ಲೆಯಾದ್ಯಂತ ಎಲ್ಲೆಡೆ ಆಯೋಜಿಸ­ಲಾಗು­ತ್ತಿದೆ. ಜಾತ್ರೆ, ಸಭೆ ಸಮಾರಂಭಗಳು, ಚಲನಚಿತ್ರ ಮಂದಿರ­ಗಳು, ಮದುವೆ ಸೇರಿದಂತೆ ಇತರೆ ಸಮಾರಂಭಗಳಲ್ಲೂ ಜಾಗೃತಿ ಉಂಟು ಮಾಡುವ ಕಾರ್ಯಕ್ರಮ­ಗಳನ್ನು ಏರ್ಪಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.