
ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯಿಲಿ ಹಾಗೂ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ರಿಲಯನ್ಸ್ ಕಂಪೆನಿಯಿಂದ ಹಣ ಹರಿದುಬರುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಬುಧವಾರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ, ಮೊಯಿಲಿಗೆ ರಿಲಯನ್ಸ್ ಸಾವಿರಾರು ಕೋಟಿ ರೂಪಾಯಿ ಕಮಿಷನ್ ರೂಪದಲ್ಲಿ ನೀಡಿದೆ. ಬಿಜೆಪಿಯ ನರೇಂದ್ರ ಮೋದಿ ಟನ್ಗಟ್ಟಲೇ ಹಣ ಸುರಿದು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಮೋದಿ ಹಾಗೂ ಮೊಯಿಲಿ ವಿರುದ್ಧ ಆಪ್ ವರಿಷ್ಠ ಅರವಿಂದ್ ಕೇಜ್ರಿವಾಲ್ ಮಾಡಿರುವ ಆರೋಪಗಳು ಸತ್ಯಾಂಶದಿಂದ ಕೂಡಿವೆ ಎಂದರು. ಚಿಕ್ಕಬಳ್ಳಾಪುರದ ಜನರು ಮತ್ತು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಒತ್ತಾಯಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಹೊರತು ನನಗೆ ಸ್ಪರ್ಧಿಸಬೇಕೆಂಬ ಅಭಿಲಾಷೆ ಇರಲಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ನನ್ನ ಎದುರಾಳಿಯಾಗಿದ್ದಾರೆ. ಅವರು ಏನೇನು ಮಾಡಿದ್ದಾರೆ ಎಂಬುದನ್ನು ಬಯಲು ಮಾಡುತ್ತೇನೆ. ವಾಸ್ತವಾಂಶ ತಿಳಿಸುತ್ತೇನೆ ಎಂದು ಹೇಳಿದರು.
ರಾಮನಗರ ಬಿಟ್ಟು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿರುವುದಕ್ಕೆ ನನ್ನನ್ನು ಕೆಲವರು ಪಲಾಯನವಾದಿ ಎಂದು ಟೀಕಿಸುತ್ತಿದ್ದಾರೆ. ಆದರೆ ನಾನು ಹೇಡಿ, ಪಲಾಯನವಾದಿಯಲ್ಲ.
ನನ್ನ ಪತ್ನಿ ಇಲ್ಲಿನ ಮಗಳು. ಹಾಗಾಗಿ ನಾನು ಚಿಕ್ಕಬಳ್ಳಾಪುರದ ಅಳಿಯ. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸಕ್ಕೆ ಕಟ್ಟು ಬಿದ್ದು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಜೆಡಿಎಸ್ ಒಂದು ಅಥವಾ ಎರಡು ಸ್ಥಾನ ಮಾತ್ರವೇ ಗೆಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಆದರೆ 10–12 ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ನಿ ಅನಿತಾ, ಶಾಸಕರಾದ ಜಮೀರ್ ಅಹಮದ್ ಖಾನ್, ಎಂ.ಕೃಷ್ಣಾರೆಡ್ಡಿ, ಮಂಜುನಾಥ್ ಇದ್ದರು.
‘ಭಾವೋದ್ರೇಕದ ಕಣ್ಣೀರು’
ಚಿಕ್ಕಬಳ್ಳಾಪುರ: ಜನರ ಪ್ರೀತಿ ಮತ್ತು ವಿಶ್ವಾಸ ಕಂಡು ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಭಾವೋದ್ರೇಕದಿಂದ ಸಹಜವಾಗಿಯೇ ಕಣ್ಣೀರು ಬರುತ್ತದೆ. ಅವರು ತೋರುವ ಅಭಿಮಾನ ಮತ್ತು ಪ್ರೀತಿ ಪದಗಳಲ್ಲಿ ವರ್ಣಿಸಲಾಗದೇ ಕಣ್ಣೀರು ಹರಿಯುತ್ತದೆ ಇದನ್ನೇ ವ್ಯಂಗ್ಯವಾಗಿ ಟೀಕಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.