ADVERTISEMENT

109 ಅನಪೇಕ್ಷಿತ ಘಟನೆ ಸಂಭವಿಸುವ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 5:39 IST
Last Updated 15 ಮಾರ್ಚ್ 2014, 5:39 IST

ಶಿವಮೊಗ್ಗ: ಲೋಕಸಭಾ ಕ್ಷೇತ್ರದಲ್ಲಿ 189 ಮತಗಟ್ಟೆಗಳನ್ನು ಅತಿ ಸೂಕ್ಷ್ಮ, 283 ಸೂಕ್ಷ್ಮ ಹಾಗೂ 109 ಅನಪೇಕ್ಷಿತ ಘಟನೆಗಳು ಸಂಭವಿಸುವ ಮತಗಟ್ಟೆಗಳು (ವಲ್ನರೆಬಲ್‌) ಗುರುತಿಸಲಾಗಿದೆ.  ಇದು ಸದ್ಯಕ್ಕೆ ಗುರುತಿಸಲಾಗಿದ್ದು, ಮುಂದೆ ಪರಿಸ್ಥಿತಿ ಪರಿಶೀಲನೆ ನಂತರ ಈ ಸಂಖ್ಯೆಗಳು ಹೆಚ್ಚು–ಕಡಿಮೆಯಾಗಲಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್
ತಿಳಿಸಿದರು.

ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶದ ಮತಗಟ್ಟೆಗಳಲ್ಲಿ ಪೊಲೀಸ್ ಇಲಾಖೆಯ ವ್ಯಾಪಕ ಕಟ್ಟೆಚ್ಚರವಹಿಸಿದ್ದು, ಅರೆಸೇನಾ ಪಡೆಯ ಪಹರೆ ಹಾಕಲಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟಾರೆ ಸುಮಾರು 6,500 ಪರವಾನಗಿ ಬಂದೂಕುಗಳಿವೆ. ಈಗಾಗಲೇ ಈ ಬಂದೂಕುಗಳನ್ನು ಡಿಪಾಸೆಟ್ ಮಾಡುವಂತೆ ಸಂಬಂಧಿಸಿದವರಿಗೆ ಸೂಚನೆ ಮಾಡಲಾಗಿದ್ದು, ಇಲ್ಲಿಯವರೆಗೂ 2,088 ಬಂದೂಕುಗಳನ್ನು ಡೆಪಾಸಿಟ್ ಮಾಡಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಜಿಲ್ಲೆಯಾದ್ಯಂತ ಚೆಕ್‌ಫೋಸ್ಟ್‌ಗಳನ್ನು ತೆರೆಯಲಾಗಿದ್ದು, ದಿನದ 24 ಗಂಟೆಗಳ ಕಾಲ ಪ್ರತಿ ವಾಹನ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ₨50 ಸಾವಿರ  ಮೇಲ್ಪಟ್ಟು ಹಣ ಸಾಗಾಣೆ ಮಾಡುವ ವೇಳೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಒಂದು ವೇಳೆ ಸೂಕ್ತ ದಾಖಲೆ ಇಲ್ಲದಿದ್ದದೆ ಅಂತಹ ಹಣವನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಶಾಂತಿ, -ಸುಗಮವಾಗಿ ಚುನಾವಣೆ ನಡೆಯಲು ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಜಿಲ್ಲಾ ಪೊಲೀಸ್ ಮಾಡಿದೆ. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಮಾಹಿತಿ ನೀಡಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.