ADVERTISEMENT

ಮುಂದಿನ ವಾರಾಂತ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ?

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 16:32 IST
Last Updated 1 ಏಪ್ರಿಲ್ 2023, 16:32 IST
   

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಮತದಾನ ನಡೆಸಿದ ಬೆನ್ನಲ್ಲೇ ಎಲ್ಲ ಸಂಘಟನಾ ಜಿಲ್ಲೆಗಳ ಪ್ರಮುಖರ ಜತೆ ಪಕ್ಷದ ರಾಜ್ಯ ‘ಪ್ರಮುಖರ ಸಮಿತಿ’ (ಕೋರ್‌ ಕಮಿಟಿ) ಸದಸ್ಯರು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮುಂದಿನ ವಾರಾಂತ್ಯದಲ್ಲೇ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ರೆಸಾರ್ಟ್‌ ಒಂದರಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಮನ್‌ಸುಖ್‌ ಮಾಂಡವೀಯ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಶಾಸಕ ಜಗದೀಶ ಶೆಟ್ಟರ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಶುಕ್ರವಾರ ಎಲ್ಲ ಕ್ಷೇತ್ರಗಳಲ್ಲೂ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಮತ ಪತ್ರಗಳನ್ನು ಬೆಂಗಳೂರಿಗೆ ತಂದಿದ್ದು, ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರು, ಮಂಡಲ ಸಮಿತಿಗಳ ಅಧ್ಯಕ್ಷರು ಸೇರಿದಂತೆ ಆಯಾ ಜಿಲ್ಲೆಯಲ್ಲಿನ ಪ್ರಮುಖರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ADVERTISEMENT

ಮತ ಎಣಿಕೆ ವರದಿ ಭಾನುವಾರ ಬೆಳಿಗ್ಗೆ ಲಭಿಸುವ ಸಾಧ್ಯತೆ ಇದೆ. ಅಂದೂ ಪ್ರಮುಖರ ಸಮಿತಿ ಸಭೆ ನಡೆಯಲಿದೆ. ಎಲ್ಲ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬುಧವಾರದ (ಏಪ್ರಿಲ್‌ 5) ಒಳಗೆ ದೆಹಲಿಗೆ ರವಾನೆಯಾಗಲಿದೆ. ಪಕ್ಷದ ಸಂಸದೀಯ ಮಂಡಳಿಯ ಅನುಮೋದನೆ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಗುರುವಾರ ಅಥವಾ ಶುಕ್ರವಾರ 150ರಿಂದ 170 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಸಂಭವವಿದೆ ಎಂದು ಮೂಲಗಳು ಹೇಳಿವೆ.

ಸಂಧಾನಕ್ಕೆ ಕಸರತ್ತು: ವಿಧಾನ ಪರಿಷತ್‌ ಸದಸ್ಯ ಆರ್‌. ಶಂಕರ್‌, ರಾಣೆಬೆನ್ನೂರು ಕ್ಷೇತ್ರದಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದ್ದಾರೆ. ಹಾಲಿ ಶಾಸಕ ಅರುಣ್‌ ಕುಮಾರ್‌ ಪೂಜಾರ ಮತ್ತು ಶಂಕರ್‌ ನಡುವೆ ಸಂಧಾನಕ್ಕೆ ವರಿಷ್ಠರು ಪ್ರಯತ್ನಿಸುತ್ತಿದ್ದಾರೆ. ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್‌ ವಿರುದ್ಧ ಕೆಲವು ಸ್ಥಳೀಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರತಿ ಜಿಲ್ಲೆಯ ರಾಜಕೀಯ ಸ್ಥಿತಿಗತಿ ಕುರಿತು ಪ್ರಮುಖರ ಸಮಿತಿ ಹಾಗೂ ಕೇಂದ್ರದಿಂದ ಬಂದಿರುವ ನಾಯಕರು ವಿಸ್ತೃತವಾಗಿ ಮಾಹಿತಿ ಪಡೆದಿದ್ದಾರೆ. ಎದುರಾಳಿಗಳ ಬಲಾಬಲ, ಬಿಜೆಪಿಯಲ್ಲಿರುವ ಆಕಾಂಕ್ಷಿಗಳ ಸಂಖ್ಯೆ, ಹೆಚ್ಚಿನ ಪೈಪೋಟಿ ಇರುವ ಕ್ಷೇತ್ರಗಳ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಸ್ಥಳೀಯವಾಗಿ ಆಕಾಂಕ್ಷಿಗಳ ಮಧ್ಯೆ ಸಹಮತ ಮೂಡಿಸುವ ಪ್ರಯತ್ನವೂ ನಡೆಯುತ್ತಿದೆ ಎಂದು ಮುಖಂಡರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.