ADVERTISEMENT

ಬಿಜೆಪಿಗೆ ಅಭೂತಪೂರ್ವ ಗೆಲುವು ನಿಶ್ಚಿತ: ರಾಧಾ ಮೋಹನದಾಸ್ ಅಗರವಾಲ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 14:22 IST
Last Updated 17 ಏಪ್ರಿಲ್ 2024, 14:22 IST
<div class="paragraphs"><p>ರಾಧಾ ಮೋಹನದಾಸ್ ಅಗರವಾಲ್‌</p></div>

ರಾಧಾ ಮೋಹನದಾಸ್ ಅಗರವಾಲ್‌

   

ವಿಜಯಪುರ: ‘ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಬಿಜೆಪಿ ಪರ ಅಲೆಯಿದೆ, ಬಿಜೆಪಿಗೆ ಅಭೂತಪೂರ್ವ ಗೆಲುವು ನಿಶ್ಚಿತ, ಮತ್ತೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದ್ದೇವೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲೇ ಕಾಂಗ್ರೆಸ್ 40 ರಿಂದ 45 ಸ್ಥಾನ ಗೆಲ್ಲುವುದಿಲ್ಲ. ಕರ್ನಾಟಕದಲ್ಲಂತೂ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ವಶವಾಗಲಿದೆ’ ಎಂದರು.

ADVERTISEMENT

‘ಗೆದ್ದ ಮೇಲೆ ವಿಶ್ವದಲ್ಲೇ ವಿಕಸಿತ ಭಾರತವನ್ನಾಗಿಸುವ ಸಂಕಲ್ಪ ನಮ್ಮೆಲ್ಲರದ್ದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಆಡಳಿತಕ್ಕೆ ಜನರು ಬೇಸರಗೊಂಡಿದ್ದಾರೆ’ ಎಂದರು.

‘ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ನಿಶ್ಚಿತವಾಗಿದೆ. ಉತ್ತಮ ಕೆಲಸಗಾರರಾಗಿರುವ ಜಿಗಜಿಣಗಿ ಅವರು 3.5 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ. ಹಾಗೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ. ಕೆ. ಸುರೇಶ ವಿರುದ್ದ ನಮ್ಮ ಅಭ್ಯರ್ಥಿ ಡಾ ಮಂಜುನಾಥ ಗೆಲ್ಲುತ್ತಾರೆ’ ಎಂದರು.

‘ಕಾಂಗ್ರೆಸ್‌ನವರು ನೂರಾರು ಕೋಟಿ ಖರ್ಚು ಮಾಡುತ್ತಿದ್ದಾರೆ. ಆದರೆ, ಡಾ. ಮಂಜುನಾಥ ಚುನಾವಣೆಗೆ ಹಣವಿಲ್ಲ ಎಂದಿದ್ದರು. ನಾವು ಅವರಿಗೆ ಟಿಕೆಟ್ ನೀಡಿ ಚುನಾವಣಾ ಕಣಕ್ಕಿಳಿಸಿದ್ದೇವೆ. ಅವರ ಬಳಿ ಹಣವಿಲ್ಲದಿದ್ದರೂ ಅವರ ಸೇವೆಯಿಂದ ಗೆಲ್ಲಲಿದ್ದಾರೆ’ ಎಂದರು.

‘ಕೆ.ಎಸ್.ಈಶ್ವರಪ್ಪ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಅವರು ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ಅವರ ಪುತ್ರ ಕಾಂತೇಶಗೆ ಲೋಕಸಭಾ ಟಿಕೆಟ್ ಸಿಗದ ಕಾರಣ ಈಶ್ವರಪ್ಪಗೆ ಬೇಸರವಾಗಿದೆ. ಸದ್ಯ ಅವರಿಗೆ ಭಗವಂತ ಒಳ್ಳೆಯ ಬುದ್ದಿ ಕೊಡಲಿ. ಅವರ ಬಗ್ಗೆ ನಾನು ಹೆಚ್ಚಿಗೆ ಏನೂ ಮಾತನಾಡಲು ಇಷ್ಟಪಡಲ್ಲ. ಅವರ ಬಗ್ಗೆ ನನಗೆ ದುಃಖವಿದೆ’ ಎಂದು ರಾಧಾ ಮೋಹನದಾಸ್ ಅಗರವಾಲ್‌ ಹೇಳಿದರು.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮಹೇಶ ತೆಂಗಿನಕಾಯಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ,  ಸಂಗಣ್ಣ ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಅರುಣ ಶಹಾಪುರ, ಸಂಜಯ ಪಾಟೀಲ ಕನಮಡಿ, ರಾಜಶೇಖರ ಶೀಲವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.