ADVERTISEMENT

ಪಕ್ಷದ ಅಡಿಪಾಯ ಅಲುಗಾಡಿಸಿದ ಬಿ.ಎಲ್. ಸಂತೋಷ್: ಜಗದೀಶ್‌ ಶೆಟ್ಟರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 7:30 IST
Last Updated 18 ಏಪ್ರಿಲ್ 2023, 7:30 IST
ಜಗದೀಶ್‌ ಶೆಟ್ಟರ್‌ – ಬಿ.ಎಲ್‌ ಸಂತೋಶ್‌
ಜಗದೀಶ್‌ ಶೆಟ್ಟರ್‌ – ಬಿ.ಎಲ್‌ ಸಂತೋಶ್‌    

ಹುಬ್ಬಳ್ಳಿ: ‘ನನಗೆ ಟಿಕೆಟ್ ಕೈ ತಪ್ಪಿದ್ದರ ಹಿಂದೆ ಇರುವ ವ್ಯಕ್ತಿ ಬಿ.ಎಲ್. ಸಂತೋಷ್. ತಮ್ಮ ಮಾನಸ ಪುತ್ರನಾದ ಮಹೇಶ ಟೆಂಗಿನಕಾಯಿಗೆ ಹು–ಧಾ ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಕ್ಕಾಗಿ ಸಂತೋಷ್ ಆಡಿದ ಆಟದಿಂದಾಗಿ, ಪಕ್ಷದ ಅಡಿಪಾಯವೇ ಅಲುಗಾಡುತ್ತಿದೆ’ ಎಂದು ಜಗದೀಶ ಶೆಟ್ಟರ್ ಹೇಳಿದರು.

ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ತಾವು ಪಕ್ಷದಿಂದ ಹೊರ ಹೋಗಲು ಕಾರಣರಾದ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿದ ಶೆಟ್ಟರ್, ಕೆಲ ತಿಂಗಳುಗಳಿಂದ ಪಕ್ಷದೊಳಗೆ ತಮ್ಮ ವಿರುದ್ಧ ನಡೆಯುತ್ತಿದ್ದ ಬೆಳವಣಿಗೆಗಳನ್ನು ಬಿಚ್ಚಿಟ್ಟರು.

‘ಕಳೆದ ಆರೇಳು ತಿಂಗಳಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿತ್ತು. ಈ ಸಲ ಶೆಟ್ಟರ್‌ಗೆ ಟಿಕೆಟ್ ಇಲ್ಲ, ಮಹೇಶ ಟೆಂಗಿನಕಾಯಿಗೆ ಟಿಕೆಟ್ ಅಂತಿಮವಾಗಿದೆ ಎಂಬ ಗುಸುಗುಸು ಕ್ಷೇತ್ರದಾದ್ಯಂತ ಶುರು ಮಾಡಿದ್ದರು. ಇದೆಲ್ಲ ಸಂತೋಷ್ ಕೃಪಾಶೀರ್ವಾದದಿಂದ ನಡೆದ ಕೆಲಸ. ತನ್ನ ಆಪ್ತನಿಗೆ ಟಿಕೆಟ್ ಕೊಡಿಸುವುದಕ್ಕಾಗಿ ಸಂತೋಷ್ ಪಕ್ಷದ ಹಿರಿಯ ನಾಯಕರಿಗೆ ಅಪಮಾನ ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿಯಿಂದ ನಾನು ಹೊರ ನಡೆದಿರುವುದರಿಂದ ಬಿಜೆಪಿಯ ತಳಪಾಯ ಅಲುಗಾಡಲಿದೆ. ಇದರ ಪರಿಣಾಮ ಅವಿಭಜಿತ ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಸೇರಿದಂತೆ ಇಡೀ ರಾಜ್ಯದ ಮೇಲೆ ಪರಿಣಾಮ ಬಿರಲಿದೆ’ ಎಂದು ಗುಡುಗಿದರು.

‘ಕಳೆದ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದಿಂದ ಅಲ್ಲಿನ ಹಿರಿಯ ನಾಯಕ ಸಿ.ಎಂ. ನಿಂಬಣ್ಣವರ ಬದಲಿಗೆ ಟೆಂಗಿನಕಾಯಿಗೆ ಬಿ ಫಾರಂ ಕೊಡಲಾಗಿತ್ತು. ಕಲಘಟಗಿಯಲ್ಲಿ ಕಾರ್ಯಕರ್ತರು ಹೊರಗಿನವರಿಗೆ ಸ್ಪರ್ಧಿಸಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಒತ್ತಡಕ್ಕೆ ಮಣಿದು ನಿಂಬಣ್ಣವರಿಗೆ ಟಿಕೆಟ್ ಕೊಟ್ಟರು. ಸಂತೋಷ್ ಮಾನಸ ಪುತ್ರನಿಗೆ ಅಲ್ಲಿ ಟಿಕೆಟ್ ಕೊಟ್ಟಾಗ ಏನಾಗಿತ್ತೊ, ಸೆಂಟ್ರಲ್‌ ಕ್ಷೇತ್ರದಲ್ಲೂ ಅದೇ ನಡೆಯಲಿದೆ. ಇತಿಹಾಸ ಮರುಕಳಿಸಲಿದೆ’ ಎಂದರು.

ಪಕ್ಷಕ್ಕಿಂತ ಸಂತೋಷ್ ಮುಖ್ಯ: ‘ಟೆಂಗಿನಕಾಯಿ ಸೇರಿದಂತೆ ರಾಜ್ಯದಾದ್ಯಂತ ತನಗೆ ಬೇಕಾದವರನ್ನು ಮುಂದೆ ತರಲು ಸಂತೋಷ್‌ ನಡೆಸುತ್ತಿರುವ ಕುತಂತ್ರದ ಕುರಿತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಧರ್ಮೇಂದ್ರ ಪ್ರಧಾನ್, ಅರುಣ್ ಸಿಂಗ್ ಅವರಿಗೆಲ್ಲಾ ಹೇಳಿದರೂ, ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಸಂತೋಷ್ ಎಂಬ ವ್ಯಕ್ತಿ ಮುಖ್ಯವೇ ಹೊರತು, ಪಕ್ಷವಲ್ಲ. ಇಂತಹವರು ಪಕ್ಷ ಮುಖ್ಯ ಎಂದು ಹೇಗೆ ಸಂಘಟನೆ ಮಾಡಲು ಸಾಧ್ಯ’ ಎಂದು ಬಿಜೆಪಿಯೊಳಗಿದ್ದ ಉಸಿರುಗಟ್ಟಿಸುವ ವಾತಾವರಣವನ್ನು ಬಿಚ್ಚಿಟ್ಟರು.

‘ರಾಜ್ಯದ ಬಿಜೆಪಿಯನ್ನು ಸಂತೋಷ್ ಮತ್ತು ಅವರ ಕಡೆಯವರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ರಾಜ್ಯ ಕಚೇರಿಯಲ್ಲೂ ಅವರದ್ದೇ ನಡೆಯುತ್ತದೆ. ತಮಗೆ ಬೇಕಾದ ಸುರಾನ ಮತ್ತು ಕೇಶವಪ್ರಸಾದ್ ಅವರನ್ನು ಕಚೇರಿಯಲ್ಲಿ ಕೂರಿಸಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರನ್ನೂ ಕಚೇರಿಯಿಂದ ಹೊರ ಹಾಕಿದ್ದರು. ಅವರು ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಂತೋಷ್ ಇಬ್ಬರನ್ನು ಕಚೇರಿಗೆ ಕರೆ ತಂದರು. ಒಬ್ಬರನ್ನು ಎಂಎಲ್‌ಸಿ ಮಾಡಿದರು’ ಎಂದರು.

‘ಸಂತೋಷ್ ಅವರನ್ನು ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಳಾದಲ್ಲಿ ಉಸ್ತುವಾರಿ ಮಾಡಿದರೂ ಪಕ್ಷಕ್ಕೆ ಒಳ್ಳೆಯದಾಗಲಿಲ್ಲ. ಇಷ್ಟೆಲ್ಲಾ ವೈಫಲ್ಯಗಳಿದ್ದರೂ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಸಂತೋಷ್‌ ಅವರಿಗೆ ಕರ್ನಾಟಕ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ರಾಜ್ಯದಲ್ಲಿ ಪಕ್ಷದ ತಳಮಟ್ಟದ ಸ್ಥಿತಿಯನ್ನು ಯಾರೂ ಮನವರಿಕೆ ಮಾಡುತ್ತಿಲ್ಲ. ಹಿಂದಿನ ರಾಷ್ಟ್ರೀಯ ನಾಯಕರು ಪಕ್ಷದ ಸ್ಥಿತಿ ಅರಿಯಲು ಹಿರಿಯರೊಂದಿಗೆ ತಾಸುಗಟ್ಟಲೆ ಕುಳಿತು ಚರ್ಚಿಸುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲವಾಗಿದೆ’ ಎಂದು ಹೇಳಿದರು.

‘ಸೆಂಟ್ರಲ್ ಕ್ಷೇತ್ರದಲ್ಲಷ್ಟೇ ಇಂತಹ ವಾತಾವರಣವಿಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಇಂತಹದ್ದೇ ಪರಿಸ್ಥಿತಿ ಇದೆ. ಅಲ್ಲಿನ ಶಾಸಕರು ಮತ್ತು ಸಂಸದರನ್ನು ಮಾತನಾಡಿಸಿದರೆ ಗೊತ್ತಾಗುತ್ತದೆ.

ಕೈಕೆಳಗಿದ್ದವರ ಎದುರು ಕೈ ಕಟ್ಟಿ ಕೂರಬೇಕೇ?: ‘ರಾಜ್ಯದಲ್ಲಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ರಾಜೀನಾಮೆ ಕೊಡಿಸಿ, ತಮಿಳುನಾಡಿನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಆತನೇ ಚುನಾವಣೆಯಲ್ಲಿ ಸೋತ. ಅಲ್ಲೇನು ಚಮತ್ಕಾರ ನಡೆಯಲಿಲ್ಲ. ನಾಲ್ಕು ಸೀಟು ಬಂದಿದ್ದೇ ಹೆಚ್ಚು. ಅಂತಹ ವ್ಯಕ್ತಿಯನ್ನು ರಾಜ್ಯ ಚುನಾವಣೆಯ ಸಹ ಉಸ್ತುವಾರಿ ಮಾಡಿದರು. ಅವರ ಮುಂದಿನ ಸಾಲಿನಲ್ಲಿ ಕೂತಿದ್ದಾಗ, ಮಾಜಿ ಮುಖ್ಯಮಂತ್ರಿಗಳಾಗಿರುವ ನಾನು ಮತ್ತು ಸದಾನಂದ ಗೌಡ ಹಿಂದಿನ ಸಾಲಿನಲ್ಲಿ ಕೂರಬೇಕು. ನಮ್ಮ ಕೈಕೆಳಗೆ ಕೆಲಸ ಮಾಡಿದ ಅಧಿಕಾರಿ ಹಿಂದೆ, ಏನೂ ಮಾತನಾಡದೆ ಕೂರಬೇಕಾದ ಸ್ಥಿತಿಗೆ ಪಕ್ಷವನ್ನು ತಂದರು’ ಎಂದು ತಿಳಿಸಿದರು.

‘ಮೂರು ತಿಂಗಳಿಗೊಮ್ಮೆ ನಡೆಯುವ ರಾಜ್ಯ ಕಾರ್ಯಕಾರಣಿಯಲ್ಲಿ ನಮಗೆ ಮಾತನಾಡಲು ಅವಕಾಶವೇ ಇರುತ್ತಿರಲಿಲ್ಲ. ಕಳೆದ ಮೂರು ವರ್ಷದಿಂದ ಮಾತನಾಡಲು ನಮಗೆ ಅವಕಾಶ ಕೊಡಲಿಲ್ಲ. ಪಕ್ಷದ ಹಿತಾಸಕ್ತಿಗಾಗಿ ಎಲ್ಲವನ್ನೂ ಸಹಿಸಿಕೊಂಡು ಬಂದೆ.’ ಎಂದರು.

‘ಪಕ್ಷದ ಅಧ್ಯಕ್ಷ ನಳೀನಕುಮಾರ್ ಕೂಡ ಸಂತೋಷ್ ಅವರಿಗೆ ಬೇಕಾದ ವ್ಯಕ್ತಿ. ಮುಂಚೆ ಎಂಟತ್ತು ಜನರಿದ್ದ ಕೋರ್ ಕಮಿಟಿಗೆ ನಳೀನ ಅವರನ್ನು ಸಹ ತಂದದರು. ಚುನಾವಣೆಯಲ್ಲಿ ಅನುಭವವೇ ಇಲ್ಲದವರು ಇಲ್ಲಿ ಸಹ ಉಸ್ತುವಾರಿ. ಇದು ಸಂತೋಷ್ ವರಸೆ. ಕಟೀಲ್ ಅವರ ಅವಧಿ ಮುಗಿದರೂ ಮುಂದುವರಿಸಿದರು’ ಎಂದು ಹೇಳಿದರು.

ಆಡಿಯೊ ಸತ್ಯವಾಗಿದೆ: ‘ವರ್ಷದ ಹಿಂದೆ ಕಟೀಲ್ ಅವರ ಟೆಲಿಫೋನ್ ಆಡಿಯೊ ವೈರಲ್ ಆಗಿತ್ತು. ಯಡಿಯೂರಪ್ಪ ಅವರ ಕಾಲ ಮುಗಿಯಿತು. ಮುಂದೆ ಈಶ್ವರಪ್ಪ ಮತ್ತು ಶೆಟ್ಟರ್ ಕಾಲ ಮುಗಿಯಲಿದೆ ಎಂದು ಹೇಳಿದ್ದರು. ಅದೀಗ ನಿಜವಾಗಿದೆ. ಸಂತೋಷ್ ಪ್ಲಾನ್ ಸತ್ಯವಾಗಿದೆ. ಮಾನಸ ಪುತ್ರನಿಗೆ ಟಿಕೆಟ್ ಕೊಡಿಸಲು ನನಗೆ ಅವಮಾನ ಮಾಡಿ, ಹೊರ ಹೋಗುವಂತೆ ಮಾಡಿದರು’ ಎಂದರು.

‘ನಾನು ಜೋಶಿ ಅವರನ್ನು ಸಂಸದ ಮಾಡಲು ಎಷ್ಟು ಓಡಾಡಿದ್ದೇನೆ ಎಂಬುದನ್ನು ಅವರು ನೆನಪಿಸಿಕೊಳ್ಳಲಿ. ನನ್ನ ಚುನಾವಣೆಗೂ ನಾನು ಅಷ್ಟು ಓಡಾಡುತ್ತಿರಲಿಲ್ಲ. ಅವರ ಎಲ್ಲಾ ಕರಪತ್ರಗಳಲ್ಲಿ ನನ್ನ ದೊಡ್ಡ ಫೊಟೊ ಇರುತ್ತಿತ್ತು. ನಾನು ಸ್ಪೀಕರ್ ಇದ್ದಾಗ, ನನ್ನ ಫೋಟೊ ಬದಲು ನನ್ನ ಪತ್ನಿ ಶಿಲ್ಪಾ ಶೆಟ್ಟರ್ ಫೊಟೊ ಹಾಕಲಾಗಿತ್ತು. ನನ್ನ ಪರವಾಗಿ ಅವರೇ ಭಾಷಣ ಮಾಡಿದ್ದರು’ ಎಂದು ನೆನೆದರು.

‘ನನಗೆ ಟಿಕೆಟ್ ಕೊಡಲು ನಿರಾಕರಿಸಿದಾಗ, ನನ್ನ ಪರವಾಗಿ ಗಟ್ಟಿಯಾಗಿ ಯಾಕೆ ದನಿ ಎತ್ತಲಿಲ್ಲ. ಸಂತೋಷ್‌ಗೆ ಯಾಕೆ ಮನವರಿಕೆ ಮಾಡಿಕೊಡಲಿಲ್ಲ? ಇಲ್ಲಿ ಆಗುಬಹುದಾದ ಅನಾಹುತಗಳ ಬಗ್ಗೆ ಯಾಕೆ ತಿಳಿಸಲಿಲ್ಲ. ನಿಮಗಾಗಿ ನಾವು ಏನೆಲ್ಲಾ ಮಾಡಿದೆವು. ನೀವು ಪ್ರಯತ್ನ ಮಾಡದೆ ಗಟ್ಟಿಯಾಗಿ ಮಾತನಾಡಬೇಕಿತ್ತು. ಶೆಟ್ಟರ್‌ಗೆ ಟಿಕೆಟ್ ಬೇಕೇ ಬೇಕೆ ಎಂದು ನಿಲ್ಲಬೇಕಿತ್ತು. ಅದ್ಯಾವುದನ್ನು ಮಾಡದೆ ಪ್ರಯತ್ನ ಮಾಡಿದೆವು ಎಂದು ಹೇಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಕೇಶ್ವರ್ ಬಳಿಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಜೇಟ್ಲಿ ನನಗೆ ಹೇಳಿದ್ದರು. ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದೆ. ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನನ್ನದು ಎಂದು ಹೇಳಿದ ನಾನು, ಪ್ರಲ್ಹಾದ ಜೋಶಿ ಅವರ ಹೆಸರನ್ನು ಪ್ರಸ್ತಾಪಿಸಿದ್ದೆ. ಅದರಂತೆ, ಅವರನ್ನು ಗೆಲ್ಲಿಸಿದ್ದೆ. ಅದಕ್ಕೆ ಪ್ರತಿಯಾಗಿ ಅವರು ಮಾಡಿದ್ದಾದರೂ ಏನು?’ ಎಂದು ಪ್ರಶ್ನಿಸಿದರು.

‘ನನ್ನ ಆಪ್ತರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರು ಪ್ರಯತ್ನ ಮಾಡುತ್ತಾರೆ ಎಂದರೆ ಏನರ್ಥ. ಟಿಕೆಟ್ ಕೊಡಿಸಬೇಕಿತ್ತು. ಯಡಿಯೂರಪ್ಪ ಅವರು ಸಹ ನನಗೆ ನೈತಿಕ ಬೆಂಬಲ ಕೊಡುತ್ತಾ ಬಂದಿದ್ದರು. ಕಡೆಗೆ, ನನ್ನ ವಿರುದ್ಧ ಮಾತನಾಡಿದರು’ ಎಂದರು.

‘ನಾವು ಕಟ್ಟಿದ ಮನೆಯಿಂದ ನಾವು ಅನಿವಾರ್ಯವಾಗಿ ಹೊರಹೋಗಬೇಕಾದ ಸ್ಥಿತಿಯನ್ನು ಸಂತೋಷ್ ಮತ್ತು ಅವರ ಕಡೆಯವರು ಸೃಷ್ಟಿಸಿದರು. ಇದೆಲ್ಲವನ್ನು ನಾನು ಸಹಿಸಿಕೊಂಡಿದ್ದರೆ, ಜನ ನನಗೆ ಮಾನ ಮರ್ಯಾದೆ ಇಲ್ಲವೇನೊ ಎಂದು ಮಾತನಾಡುತ್ತಾರೆ. ಜನರ ಬೆಂಬಲ ಇರುವವರೆಗೆ ಆರಿಸಿ ಬರುತ್ತೇವೆ? ಅದಕ್ಕೆ ವಯಸ್ಸಿನ ಹಂಗಿಲ್ಲ’ ಎಂದರು.

ಮರ್ಯಾದೆಗಾಗಿ ಕಾಂಗ್ರೆಸ್‌ಗೆ ಬಂದೆ: ‘70 ವರ್ಷಕ್ಕೆ ರಾಜಕೀಯ ನಿವೃತ್ತಿಗೆ ನಿರ್ಧರಿಸಿದ್ದ ನಾನು, ಅಗೌರವದಿಂದ ಹೋಗಬಾರದು ಎಂದು ನಾನು ಕಾಂಗ್ರೆಸ್‌ ಸೇರಿದ್ದೇನೆ. ನನಗೆ ಅಧಿಕಾರದ ಲಾಲಸೆ ಇಲ್ಲ. ನನ್ನನ್ನು ಗೌರವದಿಂದ ನಡೆಸಿಕೊಳ್ಳಿ ಎಂದಷ್ಟೇ ಕಾಂಗ್ರೆಸ್ ನಾಯಕರಿಗೆ ಹೇಳಿರುವೆ. ನಿಮ್ಮ ಪಕ್ಷಕ್ಕೆ ನಿಷ್ಠನಾಗಿ, ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ಮಾತು ಕೊಟ್ಟಿದ್ದೇನೆ. ‘ನಾನಿರುವ ಪಕ್ಷವನ್ನು ಗೆಲ್ಲಿಸಿ, ಅಧಿಕಾರಕ್ಕೆ ತರುವುದಷ್ಟೇ ನನ್ನ ಆದ್ಯತೆ. ಹಾಗಾಗಿ, ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ’ ಎಂದರು.
‘ಮೈಸೂರಿನಲ್ಲಿ ರಾಮದಾಸ್ ಪ್ರತಿನಿಧಿಸುವ ಕ್ಷೇತ್ರಕ್ಕೂ ಹೋಗಿದ್ದೇನೆ. ಅಲ್ಲಿನ ಪರಿಸ್ಥಿತಿ ನೋಡಿದಾಗ, ರಾಮದಾಸ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಸಂತೋಷ್ ಅವರ ಆಪ್ತರಲ್ಲ ಎಂಬ ಕಾರಣಕ್ಕಾಗಿ, ತಮಗೆ ಬೇಕಾದ ಶ್ರೀವತ್ಸ ಎಂಬುವರಿಗೆ ಟಿಕೆಟ್ ಕೊಡಲಾಯಿತು. ಅಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೆ? ಹಲವು ಕಡೆ ಇದೇ ಪರಿಸ್ಥಿತಿ ಸೃಷ್ಟಿಸಲಾಗಿದೆ. ನಮ್ಮಂತಹವರ ಅನುಭವ ಬಳಸಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಬೇಸರ ತೋಡಿಕೊಂಡರು.

‘ಸುರೇಶಕುಮಾರ್‌ ಅವರಿಗೂ ಟಿಕೆಟ್ ತಪ್ಪಿಸಲು ಇಲ್ಲದ ಅವಮಾನ ಮಾಡಿದರು. ಈ ಬಗ್ಗೆ ಅವರು ಹಿಂದೊಮ್ಮೆ ನನ್ನ ಬಳಿ ಗೋಳು ತೋಡಿಕೊಂಡಿದ್ದಾರೆ. ಅಲ್ಲಿಯೂ ಸಂತೋಷ್ ಶಿಷ್ಯನಿಗೆ ಟಿಕೆಟ್ ಎಂದು ಹೇಳಿ ಸುರೇಶ್‌ಗೆ ಅವಮಾನ ಮಾಡಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಹೀಗೆಯೇ ಮಾಡುವ ಕೆಲಸ ನಡೆದಿತ್ತು. ಕಡೆಗೂ ಇಬ್ಬರಿಗೂ ಅವಮಾನ ಮಾಡಿಯೂ ಟಿಕೆಟ್ ಸಿಕ್ಕಿತು’ ಎಂದರು.

ಯಾವುದಕ್ಕೂ ಭಯಪಡಲ್ಲ: ‘ನನ್ನ ಜೀವನ ತೆರೆದ ಪುಸ್ತಕ. ಸಾವಿರಾರು ಕೋಟಿ ಆಸ್ತಿಯ ಮನುಷ್ಯನಲ್ಲ. ಎಲ್ಲವೂ ಕಾನೂನು ವ್ಯಾಪ್ತಿಯಲ್ಲಿ ಮಾಡಿರುವವರು. ಕಾನೂನುಬಾಹಿರವಾಗಿ ಏನನ್ನೂ ಮಾಡಿಲ್ಲ. ಹಾಗಾಗಿ, ಐಟಿ, ಇ.ಡಿ.ಗೆ ನಾನು ಭಯಪಡುವ ವ್ಯಕ್ತಿಯಲ್ಲ. ನಡ್ಡಾ ಅವರಿಗೆ ಹುಬ್ಬಳ್ಳಿಗೆ ಬರುತ್ತಿದ್ದಾರೆ. ಆದರೂ, ಏನೂ ಪ್ರಯೋಜನವಾಗುವುದಿಲ್ಲ. ಈಗಾಗಲೇ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಿದೆ’ ಎಂದರು.

‘ಕಾಂಗ್ರೆಸ್‌ನಿಂದ ನಿಲ್ಲುತ್ತೇನೊ ಅಥವಾ ಪಕ್ಷೇತರ ಸ್ಪರ್ಧೆ ಅದು ನನ್ನ ಇಚ್ಛೆ. ಹೇಗೆ ಸ್ಪರ್ಧಿಸಬೇಕು ಎಂದು ಹೇಳಲು ಬೆಲ್ಲದ ಯಾರು? ನಾನು ಲಿಂಗಾಯತ ನಾಯಕ ಹೌದೊ, ಅಲ್ಲವೊ ಎಂದು ಜನ ತೀರ್ಮಾನಿಸುತ್ತಾರೆ. ನನಗೆ ಪಕ್ಷ ಅನ್ಯಾಯ ಮಾಡಿದ್ದನ್ನು ಕೇಳಿ ವಿವಿಧ ಜಿಲ್ಲೆಗಳಿಂದ ಜನರು ಹುಬ್ಬಳ್ಳಿಗೆ ಬಂದು ನನ್ನ ಜೊತೆ ನಿಲ್ಲುವುದಾಗಿ ಹೇಳಿದ್ದಾರೆ. ನಾಯಕನಾಗಿದ್ದಾಗ ಮಾತ್ರ ಜನ ಈ ರೀತಿ ಬರಲು ಸಾಧ್ಯ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿಕೆಗೆ ತಿರುಗೇಟು ನೀಡಿದರು.

‘ಬಿಜೆಪಿಯ ಅಡಿಪಾಯ ಅಲುಗಾಡುತ್ತಿರುವುದರಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆ. ಕಲಘಟಗಿ ಹಣೆಬರಹವೇ ಸೆಂಟ್ರಲ್‌ನಲ್ಲಿ ಆಗಲಿದೆ. ಪಕ್ಷದ ನಿರ್ದೇಶನದ ಮೇರೆಗೆ ಈಶ್ವರಪ್ಪ ಪತ್ರ ಬರೆದಿದ್ದಾರೆ. ಅದನ್ನು ಗಂಭಿರವಾಗಿ ಪರಿಗಣಿಸಬೇಕಿಲ್ಲ. ಹಿಂದೆ ಆರೋಪ– ಪ್ರತ್ಯಾರೋಪ ಮಾಡಿದ್ದವರು ಜೊತೆಗೂಡಿ ಪ್ರಚಾರ ಮಾಡಲೇಬೇಕಾಗುತ್ತದೆ. ಅದಕ್ಕೆ ಪಕ್ಷ ಎನ್ನುವುದು. ಕಾಂಗ್ರೆಸ್‌ನವರು 15 ಜನ ಬಿಜೆಪಿಗೆ ಬಂದಾಗ, ಯಡಿಯೂರಪ್ಪ ಅವರ ಪರವಾಗಿ ಪ್ರಚಾರ ಮಾಡಲಿಲ್ಲವೇ?’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನಾನು ಕಳೆದ ಸಲಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಆರಿಸಿ ಬರುವೆ. ಬಿಜೆಪಿಯೊಳಗೆ ಇದ್ದಾಗ ನನ್ನ ಮಹತ್ವ ಗೊತ್ತಾಗಲಿಲ್ಲ. ಈಗ ಗೊತ್ತಾಗುತ್ತಿದೆ. ನನ್ನ ಸೋಲಿಸಲು ಘಟನಾನುಘಟಿಗಳು ಬರುವುದಾದರೆ, ಬರಲಿ. ಆಗಲಾದರೂ ನನ್ನ ಮಹತ್ವ ಏನು ಎಂಬುದು ಹೊರ ಜಗತ್ತಿಗೆ ಗೊತ್ತಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.