ADVERTISEMENT

ಭಾರಿ ಸಮಾಲೋಚನೆ ಬಳಿಕ BJP ಪಟ್ಟಿ ಸಿದ್ಧ: ಸೋಮವಾರ ಪ‍್ರಕಟಣೆ ಬಹುತೇಕ ಖಚಿತ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 1:00 IST
Last Updated 10 ಏಪ್ರಿಲ್ 2023, 1:00 IST
   

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಭಾನುವಾರ ರಾತ್ರಿ ಅಂತಿಮ ರೂಪ ನೀಡಿತು. ಮೊದಲ ಪಟ್ಟಿ ಸೋಮವಾರ ಮಧ್ಯಾಹ್ನ
ದೊಳಗೆ ಬಿಡುಗಡೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುಮಾರು ಎರಡು ಗಂಟೆ ನಡೆದ ಸಭೆಯಲ್ಲಿ ಎಲ್ಲ 224 ಕ್ಷೇತ್ರಗಳ ಕುರಿತು ಚರ್ಚಿಸಲಾಯಿತು. ಮೊದಲ ಪಟ್ಟಿಯಲ್ಲಿ 170 ರಿಂದ 180 ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ಅಭ್ಯರ್ಥಿಗಳ ಹೆಸರು ಅಖೈರುಗೊಳಿಸುವ ಸಂಬಂಧ ನಡ್ಡಾ ಅವರು ರಾಜ್ಯ ನಾಯಕರ ಜತೆಗೆ ಶನಿವಾರ ಸುಮಾರು 13 ಗಂಟೆ ಸಮಾಲೋಚನೆ ನಡೆಸಿದ್ದರು. ಶನಿವಾರ ಎಲ್ಲ ಕ್ಷೇತ್ರಗಳ ಚರ್ಚೆ ಪೂರ್ಣ ಆಗಿರಲಿಲ್ಲ. ನಡ್ಡಾ ಅವರು ರಾಜ್ಯ ನಾಯಕರ ಜತೆಗೆ ಭಾನುವಾರ ನಾಲ್ಕು ಗಂಟೆಗೂ ಅಧಿಕ ಚರ್ಚಿಸಿದರು. ಪ್ರತಿ ಕ್ಷೇತ್ರಕ್ಕೆ ರಾಜ್ಯ ಪ್ರಮುಖರ ಸಮಿತಿಯು ತಲಾ 2–3 ಹೆಸರನ್ನು ಶಿಫಾರಸು ಮಾಡಿತ್ತು. ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಹೆಚ್ಚಿನ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಹೆಸರನ್ನು ತಲಾ ಒಂದಕ್ಕೆ ಇಳಿಸಲಾಯಿತು.

ADVERTISEMENT

ಗುಜರಾತ್ ಹಾಗೂ ಕರ್ನಾಟಕದ ಸನ್ನಿವೇಶ ಭಿನ್ನ. ಗುಜರಾತ್ ಮಾದರಿಯಲ್ಲಿ ಬಹು ದೊಡ್ಡ ಮಟ್ಟದ ಪ್ರಯೋಗವೂ ಇರುವುದಿಲ್ಲ. ಕೆಲವು ಅಚ್ಚರಿಯ ಬದಲಾವಣೆಗಳು ಇರುವು ದಂತೂ ಖಚಿತ. ಹಲವು ಹೊಸ ಮುಖಗಳಿಗೆ ಅವಕಾಶ ಲಭಿಸಲಿದೆ. ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬೇಕಾದ ಎಲ್ಲ ತಂತ್ರಗಳನ್ನು ಪಕ್ಷ ಮಾಡಲಿದೆ. ಈ ಕುರಿತು ನಡ್ಡಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿ?: ಕೋಲಾರ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್. ಈಶ್ಚರಪ್ಪ ಹಾಗೂ ವರುಣ ಕ್ಷೇತ್ರದಿಂದ ವಿ.ಸೋಮಣ್ಣ ಅವರನ್ನು ಕಣಕ್ಕೆ ಇಳಿಸುವ ಕುರಿತು ಪಕ್ಷದಲ್ಲಿ ಗಂಭೀರ ಚರ್ಚೆಗಳು ನಡೆದಿವೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಮುಖ್ಯಮಂತ್ರಿ ಸೇರಿ ಬಿಜೆಪಿಯ ಮುಖಂಡರು ಈಗಾಗಲೇ ಹೇಳಿದ್ದಾರೆ.

ವರುಣದಲ್ಲಿ ಸೋಮಣ್ಣ ಅವರನ್ನು ಕಣಕ್ಕೆ ಇಳಿಸಿದರೆ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಬಹುದು ಎಂಬುದು ಬಿಜೆಪಿ ನಾಯಕರ ಆಲೋಚನೆ.ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಈಶ್ಚರಪ್ಪ ಅವರನ್ನು ಹುರಿಯಾಳುವನ್ನಾಗಿ ಮಾಡಬೇಕು ಎಂಬುದಾಗಿ ಚರ್ಚೆಯಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.