ADVERTISEMENT

ಕಣ್ಣು ಮುಚ್ಚಿ ಕನಸು ಕಂಡ ಮೋದಿ: ಪ್ರಿಯಾಂಕಾ ವಾಗ್ದಾಳಿ

‘ರಾಜ್ಯದಲ್ಲಿ ಬಿಜೆಪಿಯದ್ದೇ ಸರ್ಕಾರ ಇದ್ದರೂ ಅಭಿವೃದ್ಧಿ ಏಕೆ ಆಗಲಿಲ್ಲ‘

​ಪ್ರಜಾವಾಣಿ ವಾರ್ತೆ
Published 3 ಮೇ 2023, 14:12 IST
Last Updated 3 ಮೇ 2023, 14:12 IST
   

ಬೀದರ್‌: ‘ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕವನ್ನು ದೇಶದ ನಂಬರ್‌ ಒನ್ ರಾಜ್ಯವನ್ನಾಗಿ ಮಾಡುವ ಕನಸು ಹೊಂದಿದ್ದೇನೆ ಎಂದು ಹೇಳಿದ್ದಾರೆ. ಮೂರೂವರೆ ವರ್ಷ ರಾಜ್ಯದಲ್ಲಿ ಅವರದ್ದೇ (ಬಿಜೆಪಿ) ಸರ್ಕಾರ ಇತ್ತು. ಏಕೆ ರಾಜ್ಯದ ಅಭಿವೃದ್ಧಿ ಮಾಡಲಿಲ್ಲ’ ಎಂದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಬೀದರ್ ತಾಲ್ಲೂಕಿನ ಬಗದಲ್ ತಾಂಡಾ ಸಮೀಪ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿ ಅವರು ಅಂತರಯಾಮಿ, ಸರ್ವಜ್ಞಾನಿ, ಶಕ್ತಿಮಾನ್, ಸರ್ವಪರಿ, 56 ಇಂಚಿನ ಎದೆಯುಳ್ಳವರಾಗಿದ್ದಾರೆ. ಅವರ ಕನಸು ಹೇಗೆ ಮುರಿದು ಬಿದ್ದಿತು. ಅವರದ್ದೇ ಸರ್ಕಾರ ಬೆಳಿಗ್ಗೆಯಿಂದ ಸಂಜೆಯ ವರೆಗೂ ಲೂಟಿ ಮಾಡುತ್ತಿತ್ತು. ಮೋದಿ ಅವರೆ ನೀವು ಕಣ್ಣು ಮುಚ್ಚಿ ಕನಸು ನೋಡುತ್ತಿದ್ದೀರೇನು’ ಎಂದು ಪ್ರಶ್ನಿಸಿದರು.

ADVERTISEMENT

‘ಮೋದಿ ಅವರು ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಲೂಟಿ ಮಾಡುವುದನ್ನು ಏಕೆ ತಡೆಯಲಿಲ್ಲ. ಇವರಿಗೆ ಏನು ಬೇಕಾದರೂ ಆಗಲಿ ಅಧಿಕಾರ ಬೇಕು. ಅಧಿಕಾರಕ್ಕಾಗಿ ಜನರನ್ನೂ ತುಳಿದು ಹಾಕಬಲ್ಲರು. ಬಿಜೆಪಿಗೆ ಪಾಠ ಕಲಿಸಲು ಸಮಯ ಬಂದೊದಗಿದೆ. ಯುವ ಸಮುದಾಯ ಎಚ್ಚರಗೊಳ್ಳಬೇಕು’ ಎಂದು ಹೇಳಿದರು.

’ನೀವು ಇಂದು ಉದ್ಯೋಗ ಕೇಳದಿದ್ದರೆ ಮುಂದೆ ಯಾವಾಗ ಕೇಳುತ್ತೀರಿ. ನೀವೆಲ್ಲ ಎಚ್ಚರವಾಗಬೇಕು. ಕರ್ನಾಟಕದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ. ಮುಂದೆ ಯಾವ ಸರ್ಕಾರವೂ ಕಳ್ಳತನ ಮಾಡುವ ಧೈರ್ಯ ತೋರದಂತಹ ಬದಲಾವಣೆ ತರಬೇಕು’ ಎಂದು ಕರೆ ನೀಡಿದರು.

‘ಪೂರ್ಣ ಬಹುಮತದಿಂದ ಕಾಂಗ್ರೆಸ್‌ನ್ನು ಆಯ್ಕೆ ಮಾಡಬೇಕು. ರಾಜ್ಯದಲ್ಲಿ ಜನರ ಸರ್ಕಾರ ರಚಿಸಬೇಕು. ಜನತೆಯ ಎದುರು ತಲೆ ಬಾಗುವಂತಹ ಸರ್ಕಾರ ಅಸ್ತಿತ್ವಕ್ಕೆ ತರಬೇಕು. ನಾನು ಇಲ್ಲಿ ಮತ ಕೇಳಲು ಬಂದಿಲ್ಲ. ನಿಮ್ಮನ್ನೆಲ್ಲ ಎಚ್ಚರಗೊಳಿಸಲು, ಜಾಗರೂಕರನ್ನಾಗಿ ಮಾಡಲು ಬಂದಿರುವೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ವೇದಿಕೆ ಮುಂಭಾಗದಲ್ಲಿ ಕರೆದು ಅವರತ್ತ ಕೈ ಮಾಡಿ ಇವರು ಸೇರಿದಂತೆ ‘ಜಿಲ್ಲೆಯ ಎಲ್ಲ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಿಮ್ಮ ಪ್ರದೇಶದಲ್ಲಿ ಬದಲಾವಣೆ ತರಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.