ADVERTISEMENT

ಚಿಕ್ಕಮಗಳೂರು: ಸಿ.ಟಿ.ರವಿ ಕೋಟೆಗೆ ಕಾಂಗ್ರೆಸ್‌ ಲಗ್ಗೆ

​ಪ್ರಜಾವಾಣಿ ವಾರ್ತೆ
Published 13 ಮೇ 2023, 19:32 IST
Last Updated 13 ಮೇ 2023, 19:32 IST
ಸಿ.ಟಿ.ರವಿ
ಸಿ.ಟಿ.ರವಿ   

ಬಿ.ಜೆ. ಧನ್ಯಪ್ರಸಾದ್‌

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೋಟೆಗೆ, ಕಾಂಗ್ರೆಸ್‌ ಲಗ್ಗೆ ಇಟ್ಟಿದೆ. ಕಾಂಗ್ರೆಸ್‌ ಅಭ್ಯರ್ಥಿ, ನಗರ ಸಭೆ ಮಾಜಿ ಅಧ್ಯಕ್ಷ ಎಚ್‌.ಡಿ. ತಮ್ಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಸುಮಾರು 14 ವರ್ಷಗಳಿಂದ ಸಿ.ಟಿ. ರವಿ ಅವರ ಗರಡಿಯಲ್ಲೇ ಇದ್ದ, ಅವರ ಆಪ್ತರೂ ಆಗಿದ್ದ ತಮ್ಮಯ್ಯ ಅವರು  ಬಿಜೆಪಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟು, ಪಕ್ಷದಿಂದ ಸ್ಪಂದನೆ ಸಿಗದೆ ಕಾಂಗ್ರೆಸ್‌ ಸೇರಿ ರವಿ ವಿರುದ್ಧವೇ ಕಣಕ್ಕಿಳಿದಿದ್ದರು. ರವಿ ಅವರು ಈ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಗೆಲುವು ಕಂಡಿದ್ದರು.

ADVERTISEMENT

ರವಿ ಮಾತುಗಳು, ಅವರ ಅತಿಯಾದ ವಿಶ್ವಾಸ, ಕ್ಷೇತ್ರಕ್ಕೆ ವಾರಕ್ಕೊಮ್ಮೆ ಮಾತ್ರ ಭೇಟಿ ನೀಡುವ ಪರಿಪಾಟ ಮೊದಲಾದವು ಅವರಿಗೆ ಮುಳುವಾದವು. ಬಿಜೆಪಿ ವಿರೋಧಿಗಳು ಕಾಂಗ್ರೆಸ್‌ ಜೊತೆ ಕೈಜೋಡಿಸಿದ್ದು ತಮ್ಮಯ್ಯ ಗೆಲುವಿಗೆ ಸಹಕಾರಿಯಾಯಿತು.

ರವಿ ಅವರು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರನ್ನು ಮತ್ತೆ ಮತ್ತೆ ‘ಸಿದ್ರಾಮುಲ್ಲಾ ಖಾನ್‌’ ಎಂದು ಲೇವಡಿ ಮಾಡಿದ್ದು, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ ‘ಸಾಬರಾಗಿ ಹುಟ್ಟಲು ತಡ ಏಕೆ ಈಗಲೇ ಹೋಗಿ’ ಎಂದು ಕಿಚಾಯಿಸಿದ್ದು, ಹಿಜಾಬ್‌, ಹಲಾಲ್‌ ಕಟ್‌ ವಿವಾದ ಸಂದರ್ಭದ ಹೇಳಿಕೆಗಳು ಮುಂತಾದ ಬೆಳವಣಿಗೆಗಳು ಕುರುಬ, ಮುಸ್ಲಿಂ ಸಮುದಾಯದ ಮತಗಳು ಒಟ್ಟಾಗಿ ಕಾಂಗ್ರೆಸ್‌ ಕಡೆಗೆ ವಾಲುವಂತೆ ಮಾಡಿದವು. ತಮ್ಮಯ್ಯ ಅವರು ಕ್ಷೇತ್ರದಲ್ಲಿ ಬಹುಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಸಮುದಾಯದವರು.

ಕ್ಷೇತ್ರದಲ್ಲಿ ಸಿಪಿಐ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಜೆಡಿಎಸ್‌ ಮುಖಂಡರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಂಗ್ರೆಸ್‌ ಜತೆ ಕೈಜೋಡಿಸಿದರು. ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ರೈತ ಸಂಘ, ಕೆಲವು ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದವು. ಈ ಒಗ್ಗಟ್ಟು ಕಾಂಗ್ರೆಸ್‌ಅನ್ನು ದಡ ಸೇರಿಸಿದೆ.

ರವಿ ಅವರು ಲಿಂಗಾಯತ ಸಮುದಾಯದ ವಿರುದ್ಧ ಆಡಿರುವ ‘ಕಿಡಿ’ ಮಾತುಗಳ ತುಣುಕುಗಳನ್ನು ಚುನಾವಣೆಯ ಹೊತ್ತಿನಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟದ್ದು ರವಿ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

‘ದತ್ತಪೀಠ’ ಹೋರಾಟ ವಿಚಾರ, ಹಿಂದುತ್ವ, ಸಿದ್ಧಾಂತ ಮೊದಲಾದ ಪ್ರಯೋಗಗಳು, ಕ್ಷೇತ್ರದ ಅಭಿವೃದ್ಧಿ ‘ರಿಪೋರ್ಟ್‌ ಕಾರ್ಡ್‌’ ಈ ಬಾರಿ ರವಿ ಅವರ ಕೈಹಿಡಿದಿಲ್ಲ ಎಂಬುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.