ADVERTISEMENT

ಸೀರೆ ಹಂಚಿಕೆ: ಮುನಿರತ್ನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 20:24 IST
Last Updated 10 ಏಪ್ರಿಲ್ 2023, 20:24 IST
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಗಾರಪ್ಪ ನಗರದ ರಸ್ತೆ ಬದಿಯಲ್ಲಿ ಎಸೆದಿದ್ದ ಸೀರೆಗಳು
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಗಾರಪ್ಪ ನಗರದ ರಸ್ತೆ ಬದಿಯಲ್ಲಿ ಎಸೆದಿದ್ದ ಸೀರೆಗಳು   

ಬೆಂಗಳೂರು: ಮತದಾರರಿಗೆ ಸೀರೆ ಹಂಚಿಕೆ ಮಾಡುತ್ತಿದ್ದ ಆರೋಪದಡಿ ಸಚಿವ ಮುನಿರತ್ನ ಹಾಗೂ ಇತರರ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ರಾಜರಾಜೇಶ್ವರಿನಗರ ವಿಧಾನ ಸಭಾ ಕ್ಷೇತ್ರದ ಜಾಗೃತ ದಳದ ಅಧಿಕಾರಿ ಮನೋಜ್‌ಕುಮಾರ್ ಅವರು ಐದು ಸೀರೆಗಳ ಸಮೇತ ದೂರು ನೀಡಿದ್ದಾರೆ. ಮತದಾರರಿಗೆ ಆಮಿಷವೊಡ್ಡುತ್ತಿದ್ದ ಆರೋಪದಡಿ ಮುನಿರತ್ನ ಹಾಗೂ ಬಿಜೆಪಿ ಮುಖಂಡ ವಿ.ಸಿ. ಚಂದ್ರು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ವಾರ್ಡ್ ನಂಬರ್ 160 ವ್ಯಾಪ್ತಿಯ ಬಂಗಾರಪ್ಪ ನಗರದ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಳಿ ಸೀರೆ ಹಂಚುತ್ತಿದ್ದ ಬಗ್ಗೆ ಜಾಗೃತ ದಳಕ್ಕೆ ಮಾಹಿತಿ ಬಂದಿತ್ತು. ಅಧಿಕಾರಿ ಮನೋಜ್‌ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ, ರಸ್ತೆ ಬದಿಯಲ್ಲಿ ಸೀರೆಗಳು ಬಿದ್ದಿದ್ದವು’ ಎಂದು ತಿಳಿಸಿದರು.

ADVERTISEMENT

‘ಸೀರೆ ಮೇಲೆ ಪ್ಲಾಸ್ಟಿಕ್ ಹೊದಿಕೆ ಇತ್ತು. ಅದರ ಮೇಲೆ ‘ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ಬಿಜೆಪಿಯೇ ಭರವಸೆ’ ಎಂಬುದಾಗಿ ಬರೆಯಲಾಗಿತ್ತು. ಸಚಿವ ಮುನಿರತ್ನ ಹಾಗೂ ಮುಖಂಡ ವಿ.ಸಿ. ಚಂದ್ರು ಭಾವಚಿತ್ರಗಳೂ ಹೊದಿಕೆ ಮೇಲಿದ್ದವು. ಐದು ಸೀರೆಗಳನ್ನು ಜಪ್ತಿ ಮಾಡಿದ್ದ ಅಧಿಕಾರಿಗಳು ಠಾಣೆಗೆ ಒಪ್ಪಿಸಿದ್ದಾರೆ. ರೇಷ್ಮೆಸೀರೆಗಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದರು.

‘ಮುನಿರತ್ನ ಬೆಂಬಲಿಗರು ಸೀರೆ ಹಂಚಿಕೆ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜಾಗೃತ ದಳದ ಅಧಿಕಾರಿಗಳು ಬರುವ ಸುದ್ದಿ ತಿಳಿದು, ಸೀರೆಗಳನ್ನು ರಸ್ತೆಯಲ್ಲಿ ಬಿಸಾಕಿ ಬೆಂಬಲಿಗರು ಓಡಿಹೋಗಿದ್ದಾರೆ. ಈ ಬಗ್ಗೆ ಸ್ಥಳೀಯರ ಹೇಳಿಕೆ ದಾಖಲಿಸಿ
ಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.