ADVERTISEMENT

ಸ್ಮಶಾನದಲ್ಲಿ ಚುನಾವಣೆ ಪ್ರಚಾರ ವಾಹನಕ್ಕೆ ಚಾಲನೆ ಕೊಡ್ತೇವೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 10:08 IST
Last Updated 2 ಏಪ್ರಿಲ್ 2023, 10:08 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ    

ಬೆಳಗಾವಿ: ‘ಈ ಬಾರಿ ಚುನಾವಣೆ ಪ್ರಚಾರಕ್ಕೆ ಹೊಸ ವಾಹನ ತಂದಿದ್ದೇವೆ. ಎರಡ್ಮೂರು ದಿನಗಳಲ್ಲಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಅದಕ್ಕೆ ಚಾಲನೆ ಕೊಡುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

‘ಈ ಬಾರಿ ಚುನಾವಣೆಯಲ್ಲೂ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೀರಾ?’ ಪ್ರಶ್ನೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಹೀಗೆ ಪ್ರತಿಕ್ರಿಯಿಸಿದರು.

‘ಪ್ರತಿದಿನ ರಾಹುಕಾಲವಿರುತ್ತದೆ. ಏ.13ರಿಂದ 20ರವರೆಗಿನ ಅವಧಿಯಲ್ಲೂ ರಾಹುಕಾಲವಿದ್ದರೆ, ಆ ವೇಳೆಯಲ್ಲೇ ನಾಮಪತ್ರ ಸಲ್ಲಿಸುತ್ತೇವೆ. ರಾಹುಕಾಲ ಮತ್ತು ಒಳ್ಳೆಯ ಕಾಲ ಎಂಬುದು ನಮ್ಮ ಭ್ರಮೆಯಷ್ಟೇ’ ಎಂದರು.

ADVERTISEMENT

‘ಕೆಲವರು ನಿಮ್ಮನ್ನು ಹಿಂದೂ ವಿರೋಧಿ ಮತ್ತು ಸಂಪ್ರದಾಯ ವಿರೋಧಿ’ ಎಂದು ಆರೋಪಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸತೀಶ, ‘ಈ ಆಚರಣೆ ಕೆಟ್ಟಿದ್ದು ಎಂದು ಹೇಳುವವರು ಯಾರು? ಅದು ನಮ್ಮ ವಿಚಾರ. ಮೂವತ್ತು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಈ ದಾರಿ ತೋರಿಸಿದ್ದೇ ಬಸವಣ್ಣ, ಬುದ್ಧ ಮತ್ತು ಅಂಬೇಡ್ಕರ್. ಈ ಆಯ್ಕೆ ನಮಗೆ ಬಿಟ್ಟಿದ್ದು. ಹೀಗೆ ಮಾಡಿ ಎಂದರೆ ಆಗುವುದಿಲ್ಲ’ ಎಂದು ತಿರುಗೇಟು ಕೊಟ್ಟರು.

‘ಯಮಕನಮರಡಿ ಕ್ಷೇತ್ರದಲ್ಲಿ ಈ ಬಾರಿ ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೆ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಾರೆ. ಕಳೆದ ಬಾರಿ ಅವರು ಅಪಪ್ರಚಾರ ಮಾಡಿದ್ದರಿಂದಲೇ ಗೆಲುವಿನ ಅಂತರ ಕಡಿಮೆಯಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿದ್ದರಾಮಯ್ಯ ಅವರಿಗೆ ಈಗ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಬಾದಾಮಿಗೆ ಬರಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಯಾವುದೇ ನಾಯಕರಿಂದ ಸಿದ್ದರಾಮಯ್ಯ ಸೋಲಿಸಲು ಸಾಧ್ಯವಿಲ್ಲ. ವರುಣಾ ಕ್ಷೇತ್ರ 40 ವರ್ಷಗಳಿಂದ ಅವರ ಕೈಹಿಡಿದಿದೆ. ಈ ಬಾರಿ ಅಲ್ಲಿ ಸೋಲುವ ಪ್ರಶ್ನೆಯೇ ಉದ್ಭವಿಸದು. ನಾನೂ ವರುಣಾ ಕ್ಷೇತ್ರಕ್ಕೆ ಪ್ರಚಾರಕ್ಕೆ ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.