ADVERTISEMENT

ಕರ್ನಾಟಕ ಚುನಾವಣಾ ಕಣ ಸ್ಪಷ್ಟ: ಇನ್ನು ಹಣಾಹಣಿ ಆಟ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 1:20 IST
Last Updated 25 ಏಪ್ರಿಲ್ 2023, 1:20 IST
ಕರ್ನಾಟಕ ಚುನಾವಣಾ ಕಣ
ಕರ್ನಾಟಕ ಚುನಾವಣಾ ಕಣ   

ಬೆಂಗಳೂರು: ವಿಧಾನಸಭೆ ಚುನಾವಣೆಯ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಕೊನೆಗೊಂಡಿದ್ದು, ಯಾರು ಯಾರ ಎದುರು ಸೆಣಸಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸೋಮವಾರ ಹೊರಹೊಮ್ಮಿದೆ.

ಕಣ ಪೈಪೋಟಿ ಅಖೈರಾಗುತ್ತಿದ್ದಂತೆ ಪ್ರಚಾರದ ಕಣಕ್ಕೆ ಧುಮುಕಿರುವ ವಿವಿಧ ಪಕ್ಷಗಳ ಅತಿರಥ ಮಹಾರಥರು, ನೆತ್ತಿ ಸುಡುವ ಬಿಸಿಲ ಝಳದ ಮಧ್ಯೆಯೇ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ತಾಲೀಮಿಗೆ ಹೊಸ ಹುರುಪು ಕೊಟ್ಟಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ನಾಯಕರು ಪ್ರಚಾರದ ಮುಂಚೂಣಿಯಲ್ಲಿದ್ದರೆ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಕೊರಟಗೆರೆಯಲ್ಲಿ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಆಸ್ಪತ್ರೆಯಿಂದ ಮನೆಗೆ ಮರಳಿದ್ದು ವಿಶ್ರಾಂತಿಯಲ್ಲಿದ್ದಾರೆ.

ಏ.13ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಅವಧಿ ಏ. 20ಕ್ಕೆ ಮುಕ್ತಾಯವಾಗಿತ್ತು. ಸ್ಪರ್ಧೆ ಬಯಸಿ 3,632 ಅಭ್ಯರ್ಥಿಗಳು 5,102 ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಬಳಿಕ, 517 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 2,613 ಅಭ್ಯರ್ಥಿಗಳು ಉಳಿದಿದ್ದಾರೆ. 

ADVERTISEMENT

ಎಲ್ಲ 224 ಕ್ಷೇತ್ರಗಳಲ್ಲೂ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ಘೋಷಿಸಿದ್ದು, ಉಳಿದ 223 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ. 209 ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳಿದ್ದರು, ಶಿವಾಜಿ ನಗರದ ಅಭ್ಯರ್ಥಿ ಆರ್.ಮಂಜುನಾಥ್‌ ನಾಮಪತ್ರ ತಿರಸ್ಕೃತವಾಗಿದೆ.  ಮಂಗಳೂರು (ಉಳ್ಳಾಲ) ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಜೆಡಿಎಸ್‌ನ 207 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಶಮನವಾಗದ ಬಂಡಾಯ:
ಟಿಕೆಟ್ ಸಿಗದ ಅಥವಾ ಪಕ್ಷ ನಿರಾಕರಿಸಿದ ಕಾರಣಕ್ಕೆ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮನವೊಲಿಸುವ ಕೆಲಸವನ್ನು ಕೊನೆ ಕ್ಷಣದವರೆಗೂ ಆಯಾ ಪಕ್ಷದ ನಾಯಕರು ನಡೆಸಿದರು. ಕೆಲವು ಕ್ಷೇತ್ರಗಳಲ್ಲಿ ಯಶಸ್ಸು ಸಿಕ್ಕಿತಾದರೂ, ಕೆಲವರು ಕಣದಿಂದ ಹಿಂದೆ ಸರಿಯಲಿಲ್ಲ. ಹೀಗಾಗಿ, ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿದೆ.

‘ಹಿರಿಯರ ನಿವೃತ್ತಿ; ಹೊಸಬರಿಗೆ ಟಿಕೆಟ್’ ಎಂಬ ಪ್ರಯೋಗವನ್ನು ಬಿಜೆಪಿ ಈ ಬಾರಿ ನಡೆಸಿದ್ದರಿಂದಾಗಿ, ಆ ಪಕ್ಷದಲ್ಲೇ ಅತೃಪ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪಕ್ಷೇತರರಾಗಿ ಕಣಕ್ಕೆ ಇಳಿದಿರುವವರ ಪೈಕಿ, ಕಮಲ ಪಾಳಯದಲ್ಲೇ ಹೆಚ್ಚಿದ್ದಾರೆ.

ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿಯಿಂದ ಹೊರಬಂದ 15ಕ್ಕೂ ಹೆಚ್ಚು ಜನರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಯಚೂರು ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಬಿ.ವಿ. ನಾಯಕ ಅವರನ್ನೇ ಸೆಳೆದ ಬಿಜೆಪಿ, ಮಾನ್ವಿಯಲ್ಲಿ ಕಣಕ್ಕೆ ಇಳಿಸಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಅನೇಕರು ಕೊನೆಗಳಿಗೆಯಲ್ಲಿ ಜೆಡಿಎಸ್‌ಗೆ ಜಿಗಿದಿದ್ದರಿಂದಾಗಿ, ಅತಿ ಹೆಚ್ಚು ಅನುಕೂಲಪಡೆದ ಪಕ್ಷವಾಗಿ ಈ ಚುನಾವಣೆಯಲ್ಲಿ ಜೆಡಿಎಸ್ ಹೊರಹೊಮ್ಮಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.