ಬೆಂಗಳೂರು: ‘ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಯಾವಾಗ ನನ್ನ ವಿರುದ್ಧ ದ್ವೇಷ ಭಾಷಣ ಮಾಡುತ್ತಾರೋ ಎಂಬ ಭಯ ಕಾಡುತ್ತಿದೆ’ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ‘ಈ ಹಿಂದೆ ಇಲ್ಲಿನ ಸಂಸದರಾಗಿದ್ದ ಡಿ.ಬಿ.ಚಂದ್ರೇಗೌಡ ಮತ್ತು ಡಿ.ವಿ.ಸದಾನಂದಗೌಡ ಅವರ ಜತೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಆದರೆ, ಶೋಭಾ ಕರಂದ್ಲಾಜೆ ಯಾವಾಗ ನನ್ನ ವಿರುದ್ಧ ದ್ವೇಷ ಭಾಷಣ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ಕ್ಷೇತ್ರಕ್ಕೆ ಹೋಗಲು ಭಯ ಆಗುತ್ತಿದೆ’ ಎಂದರು.
‘ಒಂದು ವೇಳೆ ದ್ವೇಷ ಭಾಷಣ ಮುಂದುವರಿದರೆ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ರಕ್ಷಣೆ ಕೇಳಬೇಕಾಗುತ್ತದೆ. ಅವರು ಇಲ್ಲಿಗೆ ಸಂಸದೆಯಾಗಲು ಬಂದಿದ್ದಾರೋ ಅಥವಾ ಜನರನ್ನು ಪ್ರಚೋದಿಸಲು ಬಂದಿದ್ದಾರೋ’ ಎಂದು ಅವರು ಪ್ರಶ್ನಿಸಿದರು.
ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ಗೆ ಮತ ಚಲಾಯಿಸಿದ ಎಸ್.ಟಿ.ಸೋಮಶೇಖರ್ ಮತ್ತು ಮತ ಚಲಾಯಿಸದ ಶಿವರಾಮ್ ಹೆಬ್ಬಾರ್ ಅವರು ಬಿಜೆಪಿ ವರಿಷ್ಠರು ನೀಡಿದ ನೋಟಿಸ್ಗೆ ತಲಾ 170 ಪುಟಗಳ ಉತ್ತರ ನೀಡಿರುವುದಾಗಿ ಹೇಳಿದರು.
‘ದೇಶದ ವಿವಿಧ ನ್ಯಾಯಾಲಯಗಳು ಅಡ್ಡ ಮತದಾನದ ಕುರಿತು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿ ಉತ್ತರ ನೀಡಲಾಗಿದೆ. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಇತರ ರಾಜ್ಯಗಳಲ್ಲಿ ಬಿಜೆಪಿ ಪರ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಶಾಸಕರು ಮತ ಚಲಾಯಿಸಿರುವುದನ್ನೂ ಉಲ್ಲೇಖಿಸಿದ್ದೇವೆ. ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾಯುತ್ತಿದ್ದೇವೆ’ ಎಂದು ಸೋಮಶೇಖರ್ ಮತ್ತು ಹೆಬ್ಬಾರ್ ವಿವರಿಸಿದರು.
‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇವರಿಬ್ಬರನ್ನು ಕರೆಸಿಕೊಂಡು ಶಿವಕುಮಾರ್ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರ ಪರವಾಗಿ ಸಹಾಯ ಮಾಡಲು ಕೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿ ಘೋಷಣೆಯಾದ ಬಳಿಕ ಯಶವಂತಪುರ ಶಾಸಕ ಸೋಮಶೇಖರ್ ಅವರನ್ನು ಭೇಟಿ ಮಾಡಿಲ್ಲ. ಆದರೆ, ಅವರ ಕಟ್ಟಾ ಎದುರಾಳಿ ಜೆಡಿಎಸ್ನ ಜವರಾಯಿಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.