ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನೂರಾರು ಕಾರ್ಯಕರ್ತರು ಬಿಜೆಪಿ ಬಾವುಟ ಹಾರಿಸುತ್ತ ಕಾಲ್ನಡಿಗೆಯಲ್ಲಿ ಸಾಗಿದರು. ಮುಖಂಡರು ತೆರೆದ ವಾಹನದಲ್ಲಿ ಸಾಗಿದರು.
ಇಲ್ಲಿನ ದೈವಜ್ಞ ಸಭಾಭವನದ ಎದುರಿನಲ್ಲಿ ಗೋ ಪೂಜೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಅಲ್ಪಸಂಖ್ಯಾತರ ಮತ ಬ್ಯಾಂಕ್ ಆಸೆಗೋಸ್ಕರ ಕಾಂಗ್ರೆಸ್ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು' ಎಂದರು.
ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಲೋಕಸಭೆ ಚುನಾವಣೆ ಪಕ್ಷಗಳ ಹೋರಾಟವಲ್ಲ. ಇದು ಧರ್ಮಕ್ಕಾಗಿ, ದೇಶದ ಭದ್ರತೆಗಾಗಿ ನಡೆಯುತ್ತಿರುವ ಹೋರಾಟ. ದೇಶ, ಧರ್ಮ ಉಳಿಸುವ ಕೆಲಸ ಬಿಜೆಪಿ ಮಾತ್ರ ಮಾಡಲಿದೆ ಎಂದರು.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ಕಾಂಗ್ರೆಸ್ ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುತ್ತಿದೆ. ಬಿಜೆಪಿ ಸಮಾಜದ ಪ್ರಮುಖ ಸ್ಥರವಾಗಿರುವ ಮಹಿಳೆಯರು, ಯುವಕರ ಪರವಾಗಿ ಕೆಲಸ ಮಾಡುತ್ತಿದೆ.
ಕಾರ್ಕಳ ಶಾಸಕ ವಿ.ಸುನೀಲಕುಮಾರ್, ಬಿಜೆಪಿ ಕಾರ್ಯಕರ್ತರಲ್ಲಿ ದೃಢ ನಂಬಿಕೆ ಇಟ್ಟು ಚುನಾವಣೆ ಎದುರಿಸುತ್ತಿದೆ ಎಂದರು.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮೋದಿ ಸ್ವಾರ್ಥಕ್ಕೆ ರಾಜಕಾರಣ ಮಾಡಿದವರಲ್ಲ. ದೇಶಕ್ಕಾಗಿ ಅವರ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಉತ್ತರ ಕನ್ನಡ ಕ್ಷೇತ್ರ ಹಿಂದುತ್ವದ ಭದ್ರನೆಲೆ. ಇಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡ ಅಂತರದ ಗೆಲುವು ಕಾಣಬೇಕು ಎಂದರು.
ಬಿಜೆಪಿ ಉಸ್ತುವಾರಿ ಹರತಾಳು ಹಾಲಪ್ಪ, ಶಾಸಕರಾದ ವಿಠ್ಠಲ ಹಲಗೇಕರ, ದಿನಕರ ಶೆಟ್ಟಿ, ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ಧಿ, ಎಸ್.ವಿ.ಸಂಕನೂರ, ಮುಖಂಡರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ಸೂರಜ್ ನಾಯ್ಕ ಸೋನಿ, ಎಸ್.ಎಲ್.ಘೋಟ್ನೇಕರ, ಅರವಿಂದ ಪಾಟೀಲ, ಎನ್.ಎಸ್.ಹೆಗಡೆ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.