ADVERTISEMENT

ಎಚ್.ಡಿ. ಕುಮಾರಸ್ವಾಮಿಗೆ ನೋಟಿಸ್‌: ಮಹಿಳಾ ಆಯೋಗ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 15:02 IST
Last Updated 14 ಏಪ್ರಿಲ್ 2024, 15:02 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಯಿಂದ ಮಹಿಳೆಯರ ಘನತೆ ಹಾಗೂ ಚಾರಿತ್ರ್ಯಕ್ಕೆ ಧಕ್ಕೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರಿಗೆ ನೋಟಿಸ್‌ ನೀಡಲಾಗುವುದು’ ಎಂದು ರಾಜ್ಯ ಮಹಿಳಾ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುರಿತು ಅಪಮಾನಕಾರಿ ಹೇಳಿಕೆ ನೀಡಿರುವ ಸಂಜಯ ಪಾಟೀಲ ವಿರುದ್ಧವೂ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದಿದ್ದಾರೆ.

‘ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಮಹಿಳೆಯರ ಬಗ್ಗೆ ಹಾಗೂ ಅವರ ಘನತೆಯನ್ನು ಕುಂದಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ವಿಚಾರ. ಈ ವಿಚಾರವನ್ನು ಸಾಮಾಜಿಕ ದೃಷ್ಟಿಕೋನದಿಂದ ಗಂಭೀರವಾಗಿ ಪರಿಗಣಿಸಿ ಮಹಿಳಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ತುರುವೇಕೆರೆ ಪಟ್ಟಣದಲ್ಲಿ ಶನಿವಾರ ನಡೆದ  ಹಮ್ಮಿಕೊಂಡಿದ್ದ ಪ್ರಚಾರದ ರ್‍ಯಾಲಿಯಲ್ಲಿ ಮಾತನಾಡಿದ್ದ ಎಚ್‌.ಡಿ. ಕುಮಾರಸ್ವಾಮಿ, ‘ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ’ ಎಂದು ಹೇಳಿದ್ದರು‌. 

ಬೆಳಗಾವಿ ಸಮೀಪದ ಹಿಂಡಲಗಾದಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ  ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ, ‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ‘ಅಕ್ಕ’ ನಿದ್ದೆಗೆಡುತ್ತಾರೆ. ಅವರಿಂದು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲವೇ ಒಂದು ‘ಪೆಗ್‌’ ಹೆಚ್ಚುವರಿ ಕುಡಿಯಬೇಕು’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೆಸರು ಹೇಳದೇ ಮೂದಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.