ADVERTISEMENT

ಜನಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಬಿ.ಎಸ್. ಯಡಿಯೂರಪ್ಪ

ಎನ್‌ಡಿಎ ಅಭ್ಯರ್ಥಿ ಪರ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 23:00 IST
Last Updated 22 ಏಪ್ರಿಲ್ 2024, 23:00 IST
ಹಳೇಬೀಡಿನಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜನರು
ಹಳೇಬೀಡಿನಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಜನರು   

ಹಳೇಬೀಡು (ಹಾಸನ ಜಿಲ್ಲೆ): ‘ರಾಜ್ಯ ಸರ್ಕಾರವು ಜನಹಿತ ಕಾಪಾಡುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನಿಂದ ಜನ ಬೇಸತ್ತಿದ್ದಾರೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಪ್ರತಿಪಾದಿಸಿದರು.

‌ಇಲ್ಲಿನ ಕಲ್ಪತರು ಶಾಲೆ ಆವರಣದಲ್ಲಿ ಸೋಮವಾರ ಎನ್‌ಡಿಎ ಮೈತ್ರಿಕೂಟದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಸುಳ್ಳು ಭರವಸೆ ಕೊಡುತ್ತಿದೆ. ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಹೊಸ ರಸ್ತೆ ನಿರ್ಮಾಣ ಆಗುವುದಿರಲಿ, ರಸ್ತೆ ಗುಂಡಿಯನ್ನೂ ಮುಚ್ಚಿಲ್ಲ. ಕೇಂದ್ರ ಸರ್ಕಾರ ಕೆ.ಜಿ.ಗೆ ₹29ರಂತೆ ಅಕ್ಕಿ ಕೊಡುತ್ತಿದೆ. ಪಡಿತರ ಅಕ್ಕಿ ಕೇಂದ್ರದಿಂದ ಬರುತ್ತಿದ್ದು, ಸಿದ್ದರಾಮಯ್ಯ ರಾಜ್ಯ ಸರ್ಕಾರದ ಅಕ್ಕಿ ಎಂದು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 10 ತಿಂಗಳಿನಿಂದ ಯಾವ ಜನೋಪಯೋಗಿ ಕೆಲಸ ಮಾಡಿದೆ’ ಎಂದು ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಹಳ್ಳಿಗಳಿಗೆ ರಸ್ತೆ ನಿರ್ಮಿಸಲಾಗುತ್ತಿದೆ. ಜಲಜೀವನ್‌ ಮಿಷನ್‌ ಅಡಿ ಮನೆ ಬಾಗಿಲಿಗೆ ನೀರು ಕೊಡುತ್ತಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂಬ ಮಾತು ಎಲ್ಲರಿಂದ ಕೇಳಿ ಬರುತ್ತಿದೆ. ಮೋದಿ ಅವರಿಗೆ ಭಾರತದಲ್ಲಿ ಪ್ರತಿಸ್ಪರ್ಧಿಯೇ ಇಲ್ಲ’ ಎಂದು ಹೇಳಿದರು.

ADVERTISEMENT

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ‘ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಮೈತ್ರಿಕೂಟ ಗೆಲವು ಸಾಧಿಸುವಂತೆ ಎರಡೂ ಪಕ್ಷದವರು ಹೆಜ್ಜೆ ಹಾಕಿದ್ದೇವೆ. ಚಿಕ್ಕಮಗಳೂರಿಗೆ ಕುಡಿಯುವ ನೀರು ಪೂರೈಸಲೆಂದೇ ಯಗಚಿ ಅಣೆಕಟ್ಟೆ ನಿರ್ಮಿಸಲಾಗಿದೆ. ಇದು ನಮ್ಮ ಅಭಿವೃದ್ಧಿ ಕೆಲಸ. ಅಣೆಕಟ್ಟೆಯಿಂದ ಬೇಲೂರು ತಾಲ್ಲೂಕಿನಲ್ಲಿಯೂ ನೀರು ಬಸಲು ಅವಕಾಶವಿದೆ’ ಎಂದು ಹೇಳಿದರು.

‘ರಾಜ್ಯಸಭೆಯಲ್ಲಿ ಇನ್ನೂ ಎರಡು ವರ್ಷ ನನ್ನ ಅಧಿಕಾರವಿದೆ. ನರೇಂದ್ರ ಮೋದಿ ಅವರೊಂದಿಗೆ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಎಲ್ಲ ಕ್ಷೇತ್ರದಲ್ಲಿಯೂ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಬಿಜೆಪಿ –ಜೆಡಿಎಸ್ ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಕಾಂಗ್ರೆಸ್‌ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿಲ್ಲ. ಕಾಂಗ್ರೆಸ್ ನಿಲುವಿನಿಂದ ಜನ ಬೇಸರಗೊಂಡಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯನ್ನು ಜನ ಒಪ್ಪಿಕೊಂಡಿದ್ದಾರೆ. ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ’ ಎಂದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್ ಮಾತನಾಡಿ, ‘ರಣಘಟ್ಟ ಯೋಜನೆಗೆ ದೇವೇಗೌಡರು ಮೊದಲು ಆಸಕ್ತಿ ವಹಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹಣ ಬಿಡುಗಡೆ ಮಾಡಿದರು. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಉಳಿದ ಹಣ ಬಿಡುಗಡೆ ಮಾಡಿ ಕಾಮಗಾರಿಗೆ ಅನುಮೋದನೆ ಕೊಟ್ಟರು‌. ರಣಘಟ್ಟ ಯೋಜನೆಯ ಕೀರ್ತಿ ದೇವೇಗೌಡರು ಹಾಗೂ ಯಡಿಯೂರಪ್ಪ ಇಬ್ಬರಿಗೂ ಸಲ್ಲುತ್ತದೆ’ ಎಂದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ‘ಬೇಲೂರು ತಾಲ್ಲೂಕಿನ ಮಲೆನಾಡಿನ ಕಾಫಿ ಬೆಳೆಗಾರರು ಅನುಭವಿಸುತ್ತಿರುವ ಆನೆ ಸಮಸ್ಯೆ ನಿವಾರಣೆಗೆ ಆನೆ ಕಾರಿಡಾರ್ ನಿರ್ಮಿಸಲು ದೇವೇಗೌಡರು ಹಾಗೂ ನರೇಂದ್ರ ಮೋದಿ ಸಂಕಲ್ಪ ಮಾಡಿದ್ದಾರೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತೋ.ಚ.ಅನಂತ ಸುಬ್ಬರಾಯ, ಎ.ಎಸ್.ಆನಂದ್, ಬೆಣ್ಣೂರು ರೇಣುಕುಮಾರ್, ಬಿ.ಕೆ.ಚಂದ್ರಕಲಾ, ಭಾರತಿ ಅರುಣ್ ಕುಮಾರ್, ಎಂ.ಎ.ನಾಗರಾಜು, ಸಿ.ಎಸ್. ಪ್ರಕಾಶ್, ಲತಾ ದಿಲೀಪ್ ಕುಮಾರ್, ಬಿ.ಡಿ.ಚಂದ್ರೇಗೌಡ, ನಟರಾಜ್ ಐಸಾಮಿಗೌಡ, ಜಿ.ಬಿ.ರಂಗೇಗೌಡ ಭಾಗವಹಿಸಿದ್ದರು.

ಹಳೇಬೀಡಿನ ಕಲ್ಪತರು ಶಾಲೆ ಆವರಣದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರದ ಸಭೆಯನ್ನು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹಾಗೂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರವು ಜನಪರವಾಗಿ ಕೆಲಸ ಮಾಡುತ್ತಿಲ್ಲ. ಲೋಕಸಭಾ ಚುನಾವಣೆ ನಂತರ ರಾಜ್ಯ ಸರ್ಕಾರಕ್ಕೆ ಉಳಿಗಾಲವಿಲ್ಲ.
–ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಂದ್ರದಲ್ಲಿ ಉನ್ನತ ಸ್ಥಾನ ದೊರಕಲಿದ್ದು ರಾಜ್ಯದ ಅಭಿವೃದ್ದಿಗೆ ವರದಾನ ಆಗಲಿದೆ. ಕಾಂಗ್ರೆಸ್‌ ಕಿತ್ತೊಗೆಯಲು ಮೈತ್ರಿ ಮಾಡಿಕೊಳ್ಳಲಾಗಿದೆ.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.