ADVERTISEMENT

ಮೋದಿ–ಯೋಗಿಯಿಂದ ‘ದೇಶದ್ರೋಹ’: ಎಚ್‌.ಕೆ. ಪಾಟೀಲ

'ಪುಲ್ವಾಮಾ: ಯೋಧರ ಬೇಡಿಕೆಯಂತೆ ಹೆಲಿಕಾಪ್ಟರ್, ರಕ್ಷಣೆ ಏಕೆ ನೀಡಿರಲಿಲ್ಲ'

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 14:11 IST
Last Updated 5 ಏಪ್ರಿಲ್ 2019, 14:11 IST
ಎಚ್.ಕೆ. ಪಾಟೀಲ
ಎಚ್.ಕೆ. ಪಾಟೀಲ   

ಹಾವೇರಿ:ಕಾನೂನು ಬಾಹಿರವಾಗಿ ಸೇನಾ ಸಮವಸ್ತ್ರ ಧರಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯ ಸೇನೆಯನ್ನು ‘ಮೋದಿ ಸೇನೆ’ ಎಂದು ಕರೆದು ಅವಮಾನಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೃತ್ಯಗಳು ‘ದೇಶದ್ರೋಹ’ವಾಗಿದ್ದು, ಚುನಾವಣಾ ಆಯೋಗವು ಇಬ್ಬರನ್ನೂ ಹುದ್ದೆ ಹಾಗೂ ಚುನಾವಣೆಯಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಆಗ್ರಹಿಸಿದರು.

ನಮ್ಮ ದೇಶದ ಸೇನೆಯನ್ನು ‘ಮೋದಿ ಸೇನೆ’ ಎಂದು ಹೇಳಿದ ಯೋಗಿ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳಬೇಕು. ಅವರಿಗೆ ಸಾರ್ವಜನಿಕವಾಗಿ ಮಾತನಾಡದಂತೆ ತಾಕೀತು ಮಾಡಬೇಕು ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಸೇನಾ ಸಮವಸ್ತ್ರವನ್ನು ಇತರರು ಹಾಕಿಕೊಳ್ಳುವಂತಿಲ್ಲ. ಸೇನಾ ದಂಡನಾಯಕರಿಗೆ ರಾಷ್ಟ್ರಪತಿ ಮಹಾದಂಡನಾಯಕರು. ಪ್ರಧಾನಿ ಅಲ್ಲ. ಆದರೆ, ತಾನೇ ಸಮವಸ್ತ್ರ ಧರಿಸಿ, ಬಣ್ಣದ ಕನ್ನಡಕ ಹಾಕಿಕೊಂಡ ಮೋದಿ ಸೇನೆಗೆ ಅವಮಾನ ಮಾಡಿದ್ದಾರೆ. ಆ ಮೂಲಕ ಜನತೆಯನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ADVERTISEMENT

ಪುಲ್ವಾಮಾ ವೈಫಲ್ಯ:

ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ, ಪುಲ್ವಾಮಾ ದಾಳಿಯನ್ನು ಏಕೆ ತಡೆಯಲಿಲ್ಲ? ಯೋಧರನ್ನು ಹೆಲಿಕಾಪ್ಟರ್‌ ಮೂಲಕ ಕರೆದೊಯ್ಯಬೇಕು ಎಂಬ ಸೇನಾಧಿಕಾರಿಗಳ ಮನವಿಗೆ ಏಕೆ ಸ್ಪಂದಿಸಲಿಲ್ಲ? ರಸ್ತೆಯಲ್ಲಿ ಹೋಗುವಾಗಲೂ ಯೋಧರಿಗೆ ಏಕೆ ರಕ್ಷಣೆಯನ್ನೂ ನೀಡಲಿಲ್ಲ? ಎಂದು ಪ್ರಶ್ನಿಸಿದ ಅವರು, ಯೋಧರನ್ನು ಮೆರವಣಿಗೆ ಮಾಡಿದಂತೆ ರಸ್ತೆಯಲ್ಲೇ ಕಳುಹಿಸಿರುವುದನ್ನು ನೋಡಿದರೆ ಸಂಶಯ ಕಾಡುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.

ಪುಲ್ವಾಮಾ ಘಟನೆ ಬಗ್ಗೆ ಸೇನಾಧಿಕಾರಿಗಳು ಮಾಹಿತಿ ನೀಡಿದ ಬಳಿಕ, ಮೋದಿ ಸುಮಾರು 8 ಗಂಟೆಗಳು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಟಿವಿಯಲ್ಲಿ ಕಂಡ ಮಕ್ಕಳೂ ತಬ್ಬಿಬ್ಬಾಗಿದ್ದರು. ಆದರೆ, ಮೋದಿಗೆ ಹೃದಯವೇ ಇಲ್ಲವೇ? ಹಿಟ್ಲರ್ ಕೂಡಾ ಕರಗಿಬಿಡುತ್ತಿದ್ದನು ಎಂದು ವಾಗ್ದಾಳಿ ನಡೆಸಿದರು.

ಈ ಘಟನಾವಳಿಗಳನ್ನು ಅವಲೋಕಿಸಿದರೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ (ಚುನಾವಣೆ ಸಮೀಪಿಸುತ್ತಿದ್ದಂತೆಯೇ ‘ನಾಟಕೀಯ ಘಟನೆ’ ಸಂಭವಿಸಲಿದೆ ) ನಿಜವಿರಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಎ.ಎಂ. ಹಿಂಡಸಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.