ADVERTISEMENT

ಹಿಂದುತ್ವದ ಆಧಾರದ ಮೇಲೆ ನಡೆಯುತ್ತಿರುವ ಚುನಾವಣೆ: ದೇಶಕ್ಕೆ ಅಪಾಯ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 14:40 IST
Last Updated 15 ಏಪ್ರಿಲ್ 2019, 14:40 IST

ಧಾರವಾಡ: ‘ದೇಶದಲ್ಲಿ ಇಂದು ಮೋದಿ, ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆಯುವ ಚುನಾವಣೆಗಳು ಜಾತಿ, ಜನಾಂಗ ಸೇರಿದಂತೆ ಹಿಂದುತ್ವದ ಆಧಾರದಲ್ಲಿ ನಡೆಯುತ್ತಿವೆ. ಇದರಿಂದ ದೇಶಕ್ಕೆ ಅಪಾಯವಿದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ವೀರಣ್ಣ ಮತ್ತಿಕಟ್ಟಿ ಹೇಳಿದರು.

‘ಪ್ರಜಾಪ್ರಭುತ್ವದ ಉಳಿವಿಗಾಗಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ಜನತೆ ಮತ ಚಲಾಯಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವ ಜನಾಂಗದ ಅಭಿವೃದ್ಧಿಗೆ ಸಂವಿಧಾನ ರಚನೆ ಮಾಡಿದ್ದು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನದ ಹಕ್ಕನ್ನು ನೀಡಿದ್ದಾರೆ. ಈ ಮೂಲಕ ಸಮಾಜದಲ್ಲಿ ಎಲ್ಲರೂ ಸಮಾನತೆಯಿಂದ ಇರಬೇಕು ಎಂಬ ತತ್ವವನ್ನು ಸಾರಿದ್ದಾರೆ. ನಮ್ಮ ರಾಷ್ಟ್ರದ ಶಕ್ತಿ ಏಕತೆ, ಸಮಾನತೆ, ಪ್ರಜಾಪ್ರಭುತ್ವ. ಈ ದೇಶದಲ್ಲಿ ಎಲ್ಲರೂ ಒಂದಾಗಿ ಸಂವಿಧಾನ ಬದ್ಧವಾಗಿ ನಡೆಯಬೇಕು’ ಎಂದರು.

ADVERTISEMENT

‘ಬಿಜೆಪಿಗರು ಮಾತನಾಡಿದರೆ 60 ವರ್ಷ ಕಾಂಗ್ರೆಸ್ ಪಕ್ಷ ಏನನ್ನು ಮಾಡಿಲ್ಲ ಎನ್ನುತ್ತಿದ್ದಾರೆ. ಮೋದಿ ಒಬ್ಬ ಸುಳ್ಳಿನ ಸರದಾರ. ಮೋದಿ ನಿಮ್ಮ ಅಭಿವೃದ್ಧಿ ಏನು ಎಂದು ಕೇಳಿದರೆ ನೋಟು ಅಮಾಣ್ಯಿಕರಣ, ಸರ್ಜಿಕಲ್ ದಾಳಿ ಎನ್ನುತ್ತಾರೆ. ಹಾಗಿದ್ದರೆ ಕಾಂಗ್ರೆಸ್ ಸಾಧನೆ ಇಲ್ಲದ ದೇಶದ ಆಣೆಕಟ್ಟೆ, ಐಐಟಿ, ಬ್ಯಾಂಕ್‌ಗಳ ಸ್ಥಾಪನೆ, ರಸ್ತೆ ಅಭಿವೃದ್ಧಿ, ಕೃಷಿಯಲ್ಲಿನ ಕ್ರಾಂತಿ, ಐಟಿ, ಭಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ಜನರು ಮರೆತಿದ್ದಾರೆ. ಕಾಂಗ್ರೆಸ್ ಕೂಡ ಸರ್ಜೀಕಲ್ ದಾಳಿ ಮಾಡಿದೆ. ಮೋದಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ ದೇಶದ ಜನರಲ್ಲಿ ಹಿಂದುತ್ವ ಸೇರಿದಂತೆ ಭಾವನಾತ್ಮಕ ವಿಷಯಗಳ ಕೆದಕಿ ಚುನಾವಣೆಗಳನ್ನು ನಡೆಸುವ ಮೂಲಕ ದೇಶದ ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕುಟುಕಿದರು.

‘ಪ್ರಸ್ತುತ ಧಾರವಾಡ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ವಿನಯ ಕುಲಕರ್ಣಿ ಅವರು ವಿದ್ಯಾರ್ಥಿ ದಿನಗಳಲ್ಲಿಯೇ ಹೋರಾಟ ಮಾಡುತ್ತಾ ಜನಪರ ಕಾಳಜಿ ಹೊಂದಿದ್ದರು. ಈ ಬಾರಿ ಕ್ಷೇತ್ರದ ಜನತೆ ವಿನಯ ಕುಲಕರ್ಣಿ ಪರವಾಗಿದ್ದಾರೆ. ಗೆಲವು ಸಾಧಿಸಲಿದ್ದಾರೆ. ಲಿಂಗಾಯತ ಸೇರಿದಂತೆ ಜಾತಿ ಆಧಾರಗಳ ಮೇಲೆ ಚುನಾವಣೆಗಳು ನಡೆಯದೇ, ಅಭಿವೃದ್ಧಿ ಕೆಲಸಗಳ ಮೇಲೆ ಚುನಾವಣೆಗಳು ನಡೆಯಬೇಕು’ ಎಂದು ಮತ್ತಿಕಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.