ADVERTISEMENT

ಹಲವರಿಗೆ ಕಾತರ, ಕೆಲವರಿಗಿಲ್ಲ ಆತುರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 19:37 IST
Last Updated 21 ಮಾರ್ಚ್ 2019, 19:37 IST
   

ನವದೆಹಲಿ: ಪಂಚಾಯಿತಿ ಚುನಾವಣೆ ಇರಲಿ, ಸಂಸತ್‌ ಚುನಾವಣೆ ಇರಲಿ– ಸ್ಪರ್ಧಿಸಲೊಂದು ಕ್ಷೇತ್ರ ಸಿಗಲಿ ಎಂದು ಕಾತರದಿಂದ ಕಾಯುವವರು, ಅದರ ಬೆನ್ನುಹತ್ತಿ ಹೋಗುವವರು ಹಲವು ಮಂದಿ. ಹಾಗಿದ್ದರೂ.‘ಇಲ್ಲ ಸ್ಪರ್ಧೆಯೇ ಮಾಡುವುದಿಲ್ಲ’ ಎಂಬ ವೈರಾಗ್ಯ ಪ್ರದರ್ಶಿಸುವವರು ಪ್ರತಿ ಚುನಾವಣೆಯಲ್ಲಿಯೂ ಇರುತ್ತಾರೆ.

ಸ್ಪರ್ಧಿಸಲು ಬಯಸುವ ಎಲ್ಲರಲ್ಲಿಯೂ ಇರುವುದು ಉನ್ನತ ಹುದ್ದೆಯ ಮಹತ್ವಾಕಾಂಕ್ಷೆ. ಅನಾರೋಗ್ಯ, ಪಕ್ಷದ ನಾಯಕತ್ವದ ಜತೆಗೆ ವಿರಸ, ಸೋಲಿನ ಭೀತಿ ಮುಂತಾದವುಗಳು ಸ್ಪರ್ಧಿಸಲು ನಿರಾಕರಿಸುವವರಲ್ಲಿ ಇರುವ ಕಾರಣ.

ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್‌, ಉಮಾಭಾರತಿ ಲೋಕಸಭೆಗೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಘೋಷಿಸಿಬಿಟ್ಟಿದ್ದಾರೆ.

ADVERTISEMENT

ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌, ಎಂಎನ್‌ಎಸ್‌ ಮುಖ್ಯಸ್ಥ ರಾಜ್ ಠಾಕ್ರೆ ಅವರೂ ಸ್ಪರ್ಧಿಸುವ ಬಯಕೆ ಇಲ್ಲ ಎಂದು ಬಿಟ್ಟಿದ್ದಾರೆ. ಕೇಂದ್ರ ಸಚಿವ ಕಲ್‌ರಾಜ್‌ ಮಿಶ್ರಾ ಅವರೂ ಈಗ ಈ ಸಾಲಿಗೆ ಸೇರಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಬಿ.ಸಿ. ಖಂಡೂರಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಕೇರಳದ ಉಮ್ಮನ್‌ ಚಾಂಡಿ ಸ್ಪರ್ಧಿಸಬೇಕು ಎಂದು ಅವರ ಪಕ್ಷಗಳೇ ದುಂಬಾಲು ಬಿದ್ದವು. ಆದರೆ, ಈ ಇಬ್ಬರೂ ಕಣಕ್ಕೆ ಇಳಿಯಲು ಮನಸ್ಸು ಮಾಡಿಲ್ಲ.

2014ರಲ್ಲಿಯೂ ಲೋಕಸಭಾ ಚುನಾವಣೆ ಹತ್ತಿರವಾದಾಗ ಇಂತಹುದೇ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆಗಿನ ಆಡಳಿತಾರೂಢ ಯುಪಿಎ ಮೈತ್ರಿಕೂಟದ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ ಪಕ್ಷದ ಹಲವರು ಸ್ಪರ್ಧೆಗೆ ನಿರಾಸಕ್ತಿ ತೋರಿದರು.

ಕೇಂದ್ರ ಸಚಿವರಾಗಿದ್ದ ಪಿ. ಚಿದಂಬರಂ ಮತ್ತು ಮನೀಶ್‌ ತಿವಾರಿ ಸ್ಪರ್ಧಿಸಲು ಹಿಂದೇಟು ಹಾಕಿದರು. ಸೋಲಿನ ಭಯವೇ ಇದಕ್ಕೆ ಕಾರಣ ಎಂದು ಆಗ ಹೇಳಲಾಗಿತ್ತು. ಈ ಬಾರಿ ಆಡಳಿತಾರೂಢ ಬಿಜೆಪಿ ಸೋಲುತ್ತದೆ ಎಂದು ಯಾವ ಸಮೀಕ್ಷೆಯೂ ಹೇಳಿಲ್ಲ. ಆದರೆ, ಹಲವು ಮುಖಂಡರು ಸ್ಪರ್ಧಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಮನೀಶ್‌ ತಿವಾರಿ ಈ ಬಾರಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಸುದೀರ್ಘ ಕಾಲದಿಂದ ಚುನಾವಣಾ ರಾಜಕಾರಣದಿಂದ ದೂರವಿದ್ದ ದಿಗ್ವಿಜಯ್‌ ಸಿಂಗ್‌ ಅವರೂ ಈ ಬಾರಿ ಸ್ಪರ್ಧಿಸುವ ಉತ್ಸಾಹದಲ್ಲಿದ್ದಾರೆ.

ಕೇರಳ ಕಾಂಗ್ರೆಸ್‌ ಘಟಕದ ಮೂವರು ಪ್ರಮುಖ ನಾಯಕರು ಲೋಕಸಭೆ ಕಣಕ್ಕಿಳಿಯಲು ನಿರಾಕರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಮುಲ್ಲಪ‍ಳ್ಳಿ ರಾಮಚಂದ್ರನ್‌ ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ)ಕೆ.ಸಿ.ವೇಣುಗೋಪಾಲ್‌ ಅವರು ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ.

ಇನ್ನೊಬ್ಬ ಹಿರಿಯ ಮುಖಂಡ ಕೆ.ವಿ. ಥಾಮಸ್‌ ಅವರಿಗೆ ಪಕ್ಷವೇ ಟಿಕೆಟ್‌ ನಿರಾಕರಿಸಿದೆ. ಕೇರಳದ ಹಾಲಿ ಸಂಸದರಲ್ಲಿ ಟಿಕೆಟ್‌ ನಿರಾಕರಣೆಗೆ ಒಳಗಾದವರು ಅವರೊಬ್ಬರು ಮಾತ್ರ.

ಮಾಯಾವತಿ ನಕಾರಕ್ಕೆ ಅರ್ಥ ಬೇರೆ

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಬುಧವಾರ ಹೇಳುವ ಮೂಲಕ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ ಅವರು ಅಚ್ಚರಿ ಮೂಡಿಸಿದ್ದರು. ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು ಎಂದು ಅವರು ಬಿಂಬಿತರಾಗುತ್ತಿರುವುದೇ ಈ ಅಚ್ಚರಿಗೆ ಕಾರಣ. ಆದರೆ, ತಕ್ಷಣವೇ ಸ್ಪಷ್ಟೀಕರಣ ಕೊಟ್ಟ ಮಾಯಾವತಿ, ಪ್ರಧಾನಿ ಹುದ್ದೆಯ ಆಕಾಂಕ್ಷೆಯಿಂದ ಹಿಂದೆ ಸರಿದಿಲ್ಲ ಎಂಬ ಸುಳಿವು ಕೊಟ್ಟಿದ್ದಾರೆ. ಮುಖ್ಯಮಂತ್ರಿಯಾದ ಬಳಿಕವೇ ಹಿಂದೆ ಶಾಸನಸಭೆಗೆ ಆಯ್ಕೆಯಾಗಿದ್ದನ್ನು ಉಲ್ಲೇಖಿಸಿದ ಅವರು ಸಂಸತ್ತಿನಲ್ಲಿಯೂ ಇದೇ ಮಾದರಿ ಅನುಸರಿಸಬಹುದು ಎಂದಿದ್ದಾರೆ.

ಎಚ್‌.ಡಿ.ದೇವೇಗೌಡ

ಹಿರಿಯ ನಾಯಕರಲ್ಲೊಬ್ಬರಾದ ಎಚ್‌.ಡಿ. ದೇವೇಗೌಡ ಅವರು ಈ ಬಾರಿಯ ಸ್ಪರ್ಧೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಂಸತ್ತಿನಲ್ಲಿ ತಾವು ಇರಬೇಕಾದ ಅಗತ್ಯದ ಬಗ್ಗೆ ಅವರು ಹಲವು ಬಾರಿ ಮಾತನಾಡಿದ್ದಾರೆ. ದೇವೇಗೌಡ ಅವರು ಈ ಬಾರಿಯೂ ಸ್ಪರ್ಧಿಸಬೇಕು ಎಂಬ ಒತ್ತಡ ಅವರ ಪಕ್ಷದಲ್ಲಿ ತೀವ್ರವಾಗಿಯೇ ಇದೆ. ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಅತೃಪ್ತಿಯ ಅಲೆ...

ಸುಷ್ಮಾ ಮತ್ತು ಉಮಾ ಅವರಿಬ್ಬರಿಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್‌ ಶಾ ಜತೆಗೆ ಭಿನ್ನಾಭಿಪ್ರಾಯ ಇದೆ ಎನ್ನಲಾಗುತ್ತಿದೆ. ಹಿರಿಯ ಮುಖಂಡರ ಬಿ.ಸಿ.ಖಂಡೂರಿ ಅವರು ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು. ಅವರನ್ನು ಕಳೆದ ವರ್ಷ ಈ ಸ್ಥಾನದಿಂದ ತೆಗೆಯಲಾಗಿದೆ. ಅವರು ಈ ಬಾರಿ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಅವರ ಮಗ ಮನೀಶ್‌ ಖಂಡೂರಿ ಅವರು ಕಾಂಗ್ರೆಸ್‌ ಸೇರಿದ್ದಾರೆ. ತಂದೆ ಪ್ರತಿನಿಧಿಸಿದ್ದ ಪುರಿ ಘರ್ವಾಲ್‌ ಕ್ಷೇತ್ರದಿಂದ ಮನೀಶ್‌ ಸ್ಪರ್ಧಿಸಲಿದ್ದಾರೆ.

ಸುಷ್ಮಾ ಸ್ವರಾಜ್‌

ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲಿಗೆ ಹೇಳಿದವರು ಸುಷ್ಮಾ ಸ್ವರಾಜ್‌. ಅವರು ಈಗ ಮಧ್ಯಪ‍್ರದೇಶದ ವಿದಿಶಾವನ್ನು ಪ್ರತಿನಿಧಿಸುತ್ತಿದ್ದಾರೆ. ಅನಾರೋಗ್ಯವೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲು ಕಾರಣ ಎಂದಿದ್ದಾರೆ. ರಾಜಕಾರಣದಿಂದ ನಿವೃತ್ತರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉಮಾಭಾರತಿ

ಉತ್ತರ ಪ್ರದೇಶದ ಝಾನ್ಸಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಉಮಾ ಭಾರತಿ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ. ಆರೋಗ್ಯ ಸರಿ ಇಲ್ಲ ಎಂಬುದೇ ಅವರು ಸ್ಪರ್ಧಿಸದಿರಲು ಕಾರಣ. ಸಕ್ರಿಯ ರಾಜಕಾರಣದಿಂದ ನಿವೃತ್ತಿ ಆಗುತ್ತಿಲ್ಲ ಎಂಬುದನ್ನು ದೃಢಪಡಿಸಿರುವ ಅವರು, ಪ್ರಚಾರಕ್ಕೆ ಸದಾ ಸಿದ್ಧ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.