ADVERTISEMENT

‘ಕೈ’ ಹಿಡಿದ ಬಿಜೆಪಿಯ ಪಪ್ಪು ಸಿಂಗ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2019, 18:00 IST
Last Updated 20 ಮಾರ್ಚ್ 2019, 18:00 IST

ಪಟ್ನಾ: ಬಿಜೆಪಿಯ ಮಾಜಿ ಸಂಸದ ಉದಯ ಸಿಂಗ್‌ ಅಲಿಯಾಸ್‌ ಪಪ್ಪು ಸಿಂಗ್‌ ಅವರು ಕಾಂಗ್ರೆಸ್‌ಗೆ ಬುಧವಾರ ಸೇರ್ಪಡೆಯಾಗಿದ್ದಾರೆ.

ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಜೆಡಿಯುಗೆ ನೀಡುವ ಮೂಲಕ ಆ ಪಕ್ಷಕ್ಕೆ ಬಿಜೆಪಿ ಶರಣಾಗಿದೆ. ಇದು ಯಾಕೆಂದೇ ಅರ್ಥವಾಗುತ್ತಿಲ್ಲ ಎಂದು ಉದಯ ಸಿಂಗ್‌ ಹೇಳಿದ್ದಾರೆ. ಜನವರಿಯಲ್ಲಿಯೇ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು.

ಪುರ್ನಿಯಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿಯಿಂದ ಅವರು ಸಂಸದರಾಗಿದ್ದರು. ಬಿಹಾರ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮದನ್‌ ಮೋಹನ್ ಝಾ ಅವರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರ ಜತೆಗೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

ADVERTISEMENT

‘ನಿತೀಶ್‌ ಕುಮಾರ್‌ ಅವರ ಜನಪ್ರಿಯತೆಯನ್ನು ಹೆಚ್ಚಿಸುವಂತಹ ಯಾವುದೇ ಕೆಲಸವೂ 2014ರ ನಂತರ ಆಗಿದ್ದು ನನಗೆ ಕಾಣಿಸುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನಷ್ಟೇ ಗೆದ್ದ ಜೆಡಿಯುಗೆ ಬಿಜೆಪಿ ತಲೆ ಬಾಗಿರುವುದು ಯಾಕೆಂದೇ ನನಗೆ ಮತ್ತು ಸಾವಿರಾರು ಕಾರ್ಯಕರ್ತರಿಗೆ ಅರ್ಥ ಆಗುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಈಗ ತನ್ನ ಮೂಲ ತತ್ವಗಳಿಂದ ದೂರ ಸರಿದಿದೆ. ವರ್ಷಗಳಿಂದ ರೂಢಿಸಿಕೊಂಡು ಬಂದ ಸಿದ್ಧಾಂತಗಳನ್ನು ಕೈಬಿಡಲಾಗಿದೆ. ಹಾಗಾಗಿಯೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಬೇಕಾಯಿತು ಎಂದು ಉದಯ್‌ ಸಿಂಗ್‌ ಹೇಳಿದ್ದಾರೆ. 2004ರವರೆಗೆ ಅವರು ಕಾಂಗ್ರೆಸ್‌ನಲ್ಲಿಯೇ ಇದ್ದರು. ಈಗ, ತಾವು ಮನೆಗೆ ಮರಳಿದಂತಾಗಿದೆ ಎಂದು ಅವರು ಹೇಳಿದ್ದಾರೆ.

***

ಬಿಜೆಪಿ ಈಗ ಭಿನ್ನ ದಾರಿಯಲ್ಲಿ ಸಾಗುತ್ತಿದೆ. ನಿರ್ದಿಷ್ಟ ಕಾರ್ಯಸೂಚಿಗಾಗಿ ಕೆಲಸ ಮಾಡುತ್ತಿದೆ. ಕಾರ್ಯಕರ್ತರ ಮಾತು ಕೇಳುವವರಿಲ್ಲ

– ಉದಯ್‌ ಸಿಂಗ್‌, ಮಾಜಿ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.