ADVERTISEMENT

ಅತಿ ಕಡಿಮೆ ಮತದಾನದ ದಾಖಲೆ

ಬಸವರಾಜ ಹವಾಲ್ದಾರ
Published 26 ಮಾರ್ಚ್ 2014, 10:09 IST
Last Updated 26 ಮಾರ್ಚ್ 2014, 10:09 IST

ಮಂಡ್ಯ: ಲೋಕಸಭೆಗೆ 1972ರಲ್ಲಿ ನಡೆದ ಉಪ ಚುನಾವಣೆಯು ಮಂಡ್ಯ ಚುನಾವಣಾ ಇತಿಹಾಸದಲ್ಲಿಯೇ ಅತೀ ಕಡಿಮೆ ಮತದಾನವಾದ ಚುನಾವಣೆ ಎಂಬ ದಾಖಲೆಗೆ ಪಾತ್ರವಾಯಿತು.

1952ರಿಂದ ಇಲ್ಲಿಯವರೆಗೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಎಂದೂ ದಾಖಲಾಗದ ಕಡಿಮೆ ಮತದಾನವಾಯಿತು. ಕೇವಲ 39.2 ರಷ್ಟು ಮತದಾರರು ಮಾತ್ರ ಮತ ಚಲಾಯಿಸಿದರು. (ಒಟ್ಟು 6,49,720 ಮತ. ಚಲಾವಣೆ: 2,47,453 ಮತ) ಅದರ ಹಿಂದಿನ ಚುನಾವಣೆಗಳಲ್ಲಿಯೂ ಶೇ 58ಕ್ಕಿಂತ ಕಡಿಮೆ ಮತದಾನವಾಗಿರಲಿಲ್ಲ ಎಂಬುದು ಗಮನಾರ್ಹ.

1971ರಲ್ಲಿ ಎರಡನೇ ಬಾರಿಗೆ ಗೆದ್ದು ಸಂಸದರಾಗಿದ್ದ ಎಸ್‌.ಎಂ. ಕೃಷ್ಣ ಅವರಿಂದ ರಾಜೀನಾಮೆ ಕೊಡಿಸಿ, ರಾಜ್ಯದ ಸಚಿವ ಸಂಪುಟಕ್ಕೆ ಸೇರಿಸಿಕೊಂಡ ಪರಿಣಾಮ 1972ರಲ್ಲಿ ಉಪಚುನಾವಣೆ ಎದುರಾಗುತ್ತದೆ.

ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಕೃಷ್ಣ ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿಸಿ, ಕೈಗಾರಿಕಾ ಮಂತ್ರಿಯಾಗಿ ಮಾಡುತ್ತಾರೆ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಯಾರನ್ನು ಅಭ್ಯರ್ಥಿಯಾಗಿಸಬೇಕು ಎಂಬ ಪ್ರಶ್ನೆ ಎದ್ದಿತು.

ಕೃಷ್ಣ ಅವರ ತಂದೆ ಎಸ್‌.ಸಿ. ಮಲ್ಲಯ್ಯ ಅವರೊಂದಿಗೆ ಕೆಲಸ ಮಾಡಿದ್ದ ದೇವರಾಜ ಅರಸು ಅವರಿಗೆ ಕೃಷ್ಣ ಅವರನ್ನು ಕಂಡರೆ ಅಪಾರ ಪ್ರೀತಿ ಇತ್ತು. ಮಲ್ಲಯ್ಯ ಅವರ ಶಿಸ್ತು, ಜನಪರ ಕಾಳಜಿಯನ್ನು ಕೃಷ್ಣ ಅವರಲ್ಲೂ ಕಂಡಿದ್ದರು. ಆದ್ದರಿಂದ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾದರು.

ಕೃಷ್ಣ ಅವರ ಸಂಪುಟ ಸೇರ್ಪಡೆಗೆ ವಿರೋಧ ವ್ಯಕ್ತವಾಯಿತು. ಆಗಲೇ ಅರಸು ಅವರು, ಕೃಷ್ಣ ಅವರಿಗೆ ದೂರದೃಷ್ಟಿ ಇದೆ. ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಹಠಕ್ಕೆ ಬಿದ್ದು ಮಂತ್ರಿ ಮಾಡಿದರು. ಮುಂದೆ ಅರಸು ಅವರ ಭವಿಷ್ಯ ನಿಜವೂ ಆಯಿತು.

ಕೆಂಗಲ್‌ ಹನುಮಂತಯ್ಯ ಅವರ ಕ್ಲಾಸ್‌ಮೇಟ್‌ ಹಾಗೂ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ 1952, 54ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದ ಮಂಡ್ಯ ತಾಲ್ಲೂಕಿನ ಕೆರಗೋಡು ಮೂಲದ ಆಗರ್ಭ ಶ್ರೀಮಂತರಾದ ಕೆ. ಚಿಕ್ಕಲಿಂಗಯ್ಯ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕೆ ಇಳಿಸಲಾಯಿತು.

ಇವರಿಗೆ ಎದುರಾಳಿಯಾಗಿ ಸಂಸ್ಥಾ ಕಾಂಗ್ರೆಸಿನಿಂದ ತಾಲ್ಲೂಕು ಬೋರ್ಡ್‌ ಸದಸ್ಯರಾಗಿದ್ದ ಚಂದಗಾಲುವಿನ ಎಂ. ಶ್ರೀನಿವಾಸ್ ಕಣಕ್ಕೆ ಇಳಿದರು. ಚಿಕ್ಕಲಿಂಗಯ್ಯ ಅವರು 20,112 ಮತಗಳಿಂದ ಗೆಲುವು ಸಾಧಿಸಿದರು.
1977ರಲ್ಲಿ ನಡೆಯುವ ಚುನಾವಣೆಯಲ್ಲಿ ಕೆ. ಚಿಕ್ಕಲಿಂಗಯ್ಯ ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದರೆ, ಹಿಂದಿನ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಎಂ. ಶ್ರೀನಿವಾಸ್‌ ಅವರು ಭಾರತೀಯ ಲೋಕದಳದಿಂದ ಸ್ಪರ್ಧಿಸಿದರು. ತುರುಸಿನ ಸ್ಪರ್ಧೆ ನಡೆದು, ಶ್ರೀನಿವಾಸ್‌ ಅವರು ಕೇವಲ 5,321 ಮತಗಳಿಂದ ಸೋತರು.

1972ರ ಚುನಾವಣೆಯ ಫಲಿತಾಂಶ
ಅಭ್ಯರ್ಥಿ ಹೆಸರು                     ಪಕ್ಷ                                 ಪಡೆದ ಮತ

ಕೆ. ಚಿಕ್ಕಲಿಂಗಯ್ಯ                 ಕಾಂಗ್ರೆಸ್‌                            1,23,405 (ವಿಜೇತರು)

ಎಂ. ಶ್ರೀನಿವಾಸ್‌                  ಎನ್‌ಸಿಓ                             1,03,293

1977ರ ಚುನಾವಣೆಯ ಫಲಿತಾಂಶ

ಕೆ. ಚಿಕ್ಕಲಿಂಗಯ್ಯ                ಕಾಂಗ್ರೆಸ್‌                              2,00,360

ADVERTISEMENT

ಎಂ. ಶ್ರೀನಿವಾಸ್‌                ಬಿಎಲ್‌ಡಿ                               1,95,039

ಜಿ. ರಂಗಸ್ವಾಮಿ                 ಪಕ್ಷೇತರ                               16,009

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.