ADVERTISEMENT

ಜಿಲ್ಲೆಯಲ್ಲಿ ಇಬ್ಬರು ನಾಯಕರ ಉದಯ

1968ರ ಲೋಕಸಭೆ ಉಪಚುನಾವಣೆ

ಬಸವರಾಜ ಹವಾಲ್ದಾರ
Published 25 ಮಾರ್ಚ್ 2014, 5:48 IST
Last Updated 25 ಮಾರ್ಚ್ 2014, 5:48 IST

ಮಂಡ್ಯ: ನಾಲ್ಕು ಬಾರಿ ಸಂಸದರಾಗಿದ್ದ ಎಂ.ಕೆ. ಶಿವನಂಜಪ್ಪ ಅವರ ನಿಧನದಿಂದ ಮಂಡ್ಯ ಲೋಕಸಭೆಗೆ ಮೊದಲ ಬಾರಿಗೆ 1968ರಲ್ಲಿ ಉಪಚುನಾವಣೆ ಎದುರಾಗುತ್ತದೆ. ಆ ಚುನಾವಣೆ ಮೂಲಕ ಇಬ್ಬರು ಯುವ ನಾಯಕರು ಹೊರ ಹೊಮ್ಮುತ್ತಾರೆ.

ಉಪಚುನಾವಣೆಯಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಪಕ್ಷದ ವತಿಯಿಂದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿದ್ದ ಎಚ್‌್.ಡಿ. ಚೌಡಯ್ಯ ಅವರು ಕಣಕ್ಕೆ ಇಳಿಯುತ್ತಾರೆ.

ಪ್ರಜಾಪ್ರತಿನಿಧಿ ಸಭೆಯಲ್ಲಿ ಪ್ರತಿನಿಧಿಯಾಗಿದ್ದ ಎಸ್‌.ಸಿ. ಮಲ್ಲಯ್ಯ ಅವರ ಪುತ್ರ, 1962ರಲ್ಲಿ ಮದ್ದೂರು ಶಾಸಕರಾಗಿ ಆಯ್ಕೆಯಾಗಿದ್ದ ಎಸ್‌.ಎಂ. ಕೃಷ್ಣ ಅವರು ಚುನಾವಣಾ ಕಣಕ್ಕೆ ಧುಮುಕುತ್ತಾರೆ.

ಚೌಡಯ್ಯ ಅವರಿಗೆ ಮಂಡ್ಯ ಲೋಕಸಭೆಯು ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು ಒಂದು ಕಡೆಯಾದರೆ, ಇನ್ನೊಂದೆಡೆ ಶಿವನಂಜಪ್ಪ ಅವರ ಜನಪರ ಕಾರ್ಯ ಹಾಗೂ ನಿಧನದ ಅನುಕಂಪದ ಅಲೆಯಿರುತ್ತದೆ.

1962ರಲ್ಲಿ ನಡೆದ ಚುನಾವಣೆಯಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಕೆ. ವೀರಣ್ಣಗೌಡರ ವಿರುದ್ಧ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ವೀರಣ್ಣಗೌಡರನ್ನು ಸೋಲಿಸಿ, 30ನೇ ವರ್ಷದಲ್ಲಿಯೇ ಎಸ್‌.ಎಂ. ಕೃಷ್ಣ ವಿಧಾನಸಭೆ ಪ್ರವೇಶಿಸಿರುತ್ತಾರೆ.

ತದ ನಂತರ 1967ರಲ್ಲಿ ನಡೆಯುವ ವಿಧಾನಸಭೆಯಲ್ಲಿ ಎಂ. ಮಂಚೇಗೌಡರ ವಿರುದ್ಧ ಸೋಲನುಭವಿಸಿದ್ದ ಕೃಷ್ಣ ಅವರಿಗೆ ಮರು ವರ್ಷವೇ ಲೋಕಸಭಾ ಚುನಾವಣೆಯ ಸವಾಲು ಎದುರಾಗುತ್ತದೆ.

ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ಅಮೆರಿಕಾದಲ್ಲಿ ಕಾನೂನು ಅಭ್ಯಾಸ ಮಾಡಿ ಬಂದಿದ್ದ ಕೃಷ್ಣ ಅವರು ಒಂದು ಕಡೆಯಾದರೆ, ಬಿಎಸ್‌ಸಿ ಕೃಷಿ ಪದವಿ ಪಡೆದಿದ್ದ ಎಚ್‌.ಡಿ. ಚೌಡಯ್ಯ ಅವರು ಮತ್ತೊಂದು ಕಡೆ. ಉನ್ನತ ವ್ಯಾಸಂಗ ಮಾಡಿದ ಇಬ್ಬರೂ ಮುಖಾಮುಖಿಯಾಗುತ್ತಾರೆ.

ಇಬ್ಬರೂ ಅಭ್ಯರ್ಥಿಗಳ ನಡುವೆ ತುರುಸಿನ ಸ್ಪರ್ಧೆ ನಡೆಯುತ್ತದೆ. ಎಸ್‌.ಎಂ. ಕೃಷ್ಣ ಅವರು 63,953 ಮತಗಳಿಂದ ಗೆಲುವು ಸಾಧಿಸುವ ಮೂಲಕ ನಾಲ್ಕು ದಶಕದ ಹಿಂದೆ ರಾಷ್ಟ್ರ ರಾಜಕಾರಣಕ್ಕೆ ಕಾಲಿಡುತ್ತಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಸೋಲನುಭವಿಸುತ್ತದೆ. ಅಚ್ಚರಿ ಎಂದರೆ ಮುಂದಿನ ವರ್ಷಗಳಲ್ಲಿ ಎಸ್‌.ಎಂ. ಕೃಷ್ಣ ಅವರು ಕಾಂಗ್ರೆಸ್ಸಿನ ಪ್ರಬಲ ನಾಯಕರಾಗಿ ಬೆಳೆಯುತ್ತಾರೆ.

1971ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಈ ಇಬ್ಬರು ನಾಯಕರು ಎದುರಾಳಿಗಳಾಗುತ್ತಾರೆ. ಕೃಷ್ಣ ಅವರ ಜಗಜೀವನ್‌ರಾಂ ಅವರ ಕಾಂಗ್ರೆಸ್‌ ಬಣದಿಂದ ಕಣಕ್ಕೆ ಇಳಿದರೆ, ಚೌಡಯ್ಯ ಅವರು ನಿಜಲಿಂಗಪ್ಪ ಅವರ ಕಾಂಗ್ರೆಸ್‌ ಬಣದಿಂದ ಸ್ಪರ್ಧಿಸುತ್ತಾರೆ. ಕೃಷ್ಣ ಮತ್ತೆ 1,62,162 ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ.

ಮುಂದೆ ಎಸ್‌.ಎಂ. ಕೃಷ್ಣ ರಾಜ್ಯದ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಾರೆ. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ವಿದೇಶಾಂಗ ಸಚಿವರಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಾರೆ.

ಎಚ್‌.ಡಿ. ಚೌಡಯ್ಯ ಅವರು ಮುಂದೆ ಕರೆಗೋಡು ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸುತ್ತಾರೆ. ಒಂದು ಅವಧಿಗೆ ವಿಧಾನ ಪರಿಷತ್‌್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಕೆ.ವಿ. ಶಂಕರಗೌಡ ಸಂಸ್ಥಾಪಿಸಿದ ಪಿಇಟಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ಅದನ್ನು ಹೆಮ್ಮರವಾಗಿಸಿದ್ದಾರೆ.

1968ರ ಚುನಾವಣೆಯ ಫಲಿತಾಂಶ
ಅಭ್ಯರ್ಥಿ ಹೆಸರು                ಪಕ್ಷ                          ಪಡೆದ ಮತ

ಎಸ್‌.ಎಂ. ಕೃಷ್ಣ              ಪಿಎಸ್‌ಪಿ                      1,84,054 (ವಿಜೇತರು)
ಎಚ್‌.ಡಿ. ಚೌಡಯ್ಯ          ಕಾಂಗ್ರೆಸ್‌                     1,20,101
ಜಿ. ರಂಗಸ್ವಾಮಿ              ಪಕ್ಷೇತರ                        3,394

1971ರ ಚುನಾವಣೆಯ ಫಲಿತಾಂಶ
ಎಸ್‌.ಎಂ. ಕೃಷ್ಣ               ಎನ್‌ಸಿಜೆ                     2,72,174 (ವಿಜೇತರು)

ADVERTISEMENT

ಎಚ್‌.ಡಿ. ಚೌಡಯ್ಯ         ಎನ್‌ಸಿಎನ್‌                    1,10,012

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.