ADVERTISEMENT

ರಾಷ್ಟ್ರ ರಾಜಕಾರಣಕ್ಕೆ ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 5:25 IST
Last Updated 3 ಏಪ್ರಿಲ್ 2014, 5:25 IST

ಮಂಡ್ಯ: ಸತತ ಮೂರು ಬಾರಿ ಗೆಲುವು ಸಾಧಿಸಿ, ಕೇಂದ್ರದ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದ ‘ಮಂಡ್ಯದ ಗಂಡು’ ಬಿರುದು ಪಡೆದಿದ್ದ ಅಂಬರೀಷ್‌ ಅವರನ್ನು ಮಣಿಸುವ ಮೂಲಕ ಎನ್‌. ಚಲುವರಾಯಸ್ವಾಮಿ ಅವರು ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದರು.

ಸತತ ನಾಲ್ಕನೇ ಗೆಲುವಿಗಾಗಿ ಕಾಂಗ್ರೆಸ್‌ ಪಕ್ಷದಿಂದ ಅಂಬರೀಷ್‌ ಕಣಕ್ಕೆ ಇಳಿದರು. ಜೆಡಿಎಸ್‌ನಿಂದ ಚಲುವರಾಯಸ್ವಾಮಿ ಕಣಕ್ಕೆ ಇಳಿದರು. ಎರಡೂ ಪಕ್ಷಗಳ ನಡುವೆ ತೀವ್ರ ಹಣಾಹಣಿ ನಡೆಯಿತು.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕಾರಣ ಮರಳಲು ಬಯಸಿದ್ದ ಅಂಬರೀಷ್‌ ಅವರು, ಶ್ರೀರಂಗಪಟ್ಟಣ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಧುಮುಕಿದರು. ಕಾಂಗ್ರೆಸ್‌ ಟಿಕೆಟಿನ ಪ್ರಬಲ ಆಕಾಂಕ್ಷಿ, ರಾಜ್ಯಸಭೆ ಸದಸ್ಯ ಎಸ್‌್.ಎಂ. ಕೃಷ್ಣ ಅವರ ಬೆಂಬಲಿಗರಾದ ರವೀಂದ್ರ ಶ್ರೀಕಂಠಯ್ಯ ಅವರು ‘ರೆಬೆಲ್‌’ ಆಗಿ ಸೆಟೆದು ನಿಂತರು. ಪರಿಣಾಮ ಅಂಬರೀಷ್‌ ಅವರಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸೋಲಿನ ಅನುಭವವಾಯಿತು.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎರಡು ಗೆಲುವಿನ ನಂತರ 2008ರಲ್ಲಿ ಸೋಲನ್ನು ಅನುಭವಿಸಿದರು. ಮರು ವರ್ಷವೇ ಲೋಕಸಭೆಗೆ ಸ್ಪರ್ಧಿಸಿದರು. ಇಬ್ಬರ ನಡುವಿನ ಸ್ಪರ್ಧೆ ತೀವ್ರವಾಯಿತು.

2009ರ ಲೋಕಸಭೆ ಚುನಾವಣೆ ಬರುವ ವೇಳೆಗೆ ಕೃಷ್ಣ ಹಾಗೂ ಅಂಬರೀಷ್‌ ಅವರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ಶ್ರೀರಂಗಪಟ್ಟಣದಿಂದ ಸೋತಿದ್ದ ಅವರಿಗೆ ಚುನಾವಣೆಯ ಆಸಕ್ತಿಯೂ ಕುಂದಿರುತ್ತದೆ. ಜತೆಗೆ ಪಕ್ಷದಲ್ಲಿ ವಿರೋಧಿಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ನಾಗಮಂಗಲದಿಂದ 2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ತಮಗೆ ಅಂಬರೀಷ್‌ ಟಿಕೆಟ್‌ ತಪ್ಪಿಸಿದರೆಂದು ಆಕ್ರೋಶಗೊಂಡಿದ್ದ ಶಿವರಾಮೇಗೌಡರು, ಕಾಂಗ್ರೆಸ್‌ ಬಿಟ್ಟು ಬಿಜೆಪಿಯಿಂದ ಚುನಾವಣಾ ಕಣಕ್ಕೆ ಇಳಿದರು. ರೈತ ಸಂಘದಿಂದ ಕೆ.ಎಸ್‌್. ಪುಟ್ಟಣ್ಣಯ್ಯ, ಬಿಎಸ್ಪಿಯಿಂದ ಎಂ. ಕೃಷ್ಣಮೂರ್ತಿ ಸ್ಪರ್ಧಿಸಿದರು.

ಕಾಂಗ್ರೆಸ್ಸಿನೊಳಗೆ ಮುಸುಕಿನ ಗುದ್ದಾಟ ನಡೆದಿದ್ದರೆ, ಇತ್ತ ಎದುರಾಳಿಯಾದ ಜೆಡಿಎಸ್‌ ಪಕ್ಷವು ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತಿರುತ್ತದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತೀವ್ರ ಹಣಾಹಣಿ ನಡೆಯುತ್ತದೆ. ಜೆಡಿಎಸ್‌ ಒಗ್ಗಟ್ಟಿನ ಪರಿಣಾಮ ಚಲುವರಾಯಸ್ವಾಮಿ 23,500 ಮತಗಳಿಂದ ಗೆಲುವು ಸಾಧಿಸಿದರು. ಆ ಮೂಲಕ ಕಳೆದ ಎರಡು ಚುನಾವಣೆಗಳಿಂದ ಕೈಬಿಟ್ಟು ಹೋಗಿದ್ದ ಕ್ಷೇತ್ರವನ್ನು ಪಕ್ಷಕ್ಕೆ ಮರಳಿ ತಂದುಕೊಟ್ಟರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.