ADVERTISEMENT

ಹೊನ್ನವಳ್ಳಿಗೆ ಶಾಶ್ವತ ನೀರಾವರಿಗೆ ಆಗ್ರಹ: ಊರಿನೆಲ್ಲೆಡೆ ಮತ ಬಹಿಷ್ಕಾರ ಪೋಸ್ಟರ್ 

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:14 IST
Last Updated 1 ಏಪ್ರಿಲ್ 2019, 14:14 IST
ತಿಪಟೂರು ತಾಲ್ಲೂಕು ಹೊನ್ನವಳ್ಳಿಯ ಮನೆ ಮುಂದೆ ಅಂಟಿಸಿರುವ ಪೋಸ್ಟರ್‌ಗಳು 
ತಿಪಟೂರು ತಾಲ್ಲೂಕು ಹೊನ್ನವಳ್ಳಿಯ ಮನೆ ಮುಂದೆ ಅಂಟಿಸಿರುವ ಪೋಸ್ಟರ್‌ಗಳು    

ತಿಪಟೂರು: ತೀವ್ರ ಬರಪೀಡಿತ ಪ್ರದೇಶವಾದ ತಾಲ್ಲೂಕಿನ ಹೊನ್ನವಳ್ಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸದಿರುವುದನ್ನು ವಿರೋಧಿಸಿ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದ ಗ್ರಾಮಸ್ಥರು ಮುಂದಿನ ಹಂತದಲ್ಲಿ ತಮ್ಮ ಮನೆ, ಅಂಗಡಿಗಳ ಮುಂದೆ ‘ಮತದಾನ ಮಾಡುವುದಿಲ್ಲ’ ಎಂಬ ಪೋಸ್ಟರ್ ಅಂಟಿಸಿಕೊಂಡು ವಿನೂತನ ಪ್ರತಿಭಟನೆ ಆರಂಭಿಸಿದ್ದಾರೆ.

ಹೊನ್ನವಳ್ಳಿಯ ಬಹುತೇಕ ಅಂಗಡಿ ಮತ್ತು ಮನೆಗಳ ಮುಂದೆ ‘ನಮ್ಮ ಮನೆಯಲ್ಲಿ ಮತದಾನ ಮಾಡುವುದಿಲ್ಲ’ ಎಂಬ ಪೋಸ್ಟರ್‌ಗಳು ಕಾಣುತ್ತಿವೆ. ಹೋರಾಟದ ಮುಂಚೂಣಿಯಲ್ಲಿರುವ ಮುಖಂಡರು ಪೋಸ್ಟರ್ ಮುದ್ರಿಸಿ ಕೊಟ್ಟಿದ್ದಾರೆ.

ಈಚೆಗಷ್ಟೇ ಶಾಶ್ವತ ನೀರಾವರಿಗೆ ಒತ್ತಾಯಿಸಿ ಹೊನ್ನವಳ್ಳಿ ಬಂದ್ ನಡೆಸಿ ಪ್ರತಿಭಟನೆ ಮಾಡಿದ್ದರು. ‘ಯಾರೂ ಮತದಾನ ಮಾಡುವುದಿಲ್ಲ’ ಎಂಬ ಪ್ರಮಾಣ ಮಾಡಿದ್ದರು. ಅದರ ಮುಂದುವರಿದ ರೂಪವಾಗಿ ಪೋಸ್ಟರ್ ಚಳವಳಿ ಆರಂಭಿಸಿದ್ದಾರೆ. ಪ್ರಚಾರಕ್ಕೆ ಬರುವ ಯಾರನ್ನೂ ಊರಿಗೆ ಮತ್ತು ಮನೆ ಬಳಿ ಬಿಟ್ಟುಕೊಳ್ಳುವುದಿಲ್ಲ ಎಂದು ಮುಖಂಡರು ಎಚ್ಚರಿಸಿದ್ದಾರೆ.

ADVERTISEMENT

‘ಬಹಳ ವರ್ಷಗಳಿಂದ ಈ ಹೋಬಳಿ ಸತತ ಬರದಿಂದ ನಲುಗಿ ಹೋಗಿದೆ. ಒಂದು ಕಾಲಕ್ಕೆ ತಾಲ್ಲೂಕು ಕೇಂದ್ರವಾಗಿದ್ದ ಹೊನ್ನವಳ್ಳಿ ಇಂದು ದುಸ್ಥಿತಿಯಲ್ಲಿದೆ. ಅಂತರ್ಜಲ ಬತ್ತಿ ಇಲ್ಲಿನ ಪ್ರಸಿದ್ಧ ಗಂಗಾಪಾಣಿ ತೆಂಗಿನ ಮರಗಳು ಸರ್ವ ನಾಶವಾಗಿವೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಊರಿನಲ್ಲಿ ಎರಡು ದೊಡ್ಡ ಕೆರೆಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೊನ್ನವಳ್ಳಿ ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸುವುದಾಗಿ ಭರವಸೆ ನೀಡಿದ್ದ ರಾಜಕಾರಣಿಗಳು ಮೂಗಿಗೆ ತುಪ್ಪ ಸವರಿ ಸುಮ್ಮನಾಗಿದ್ದಾರೆ’.

‘ಆ ಯೋಜನೆಯಿಂದ ಕೆರೆ ಬಳಿಗೆ ಪೈಪ್‍ಲೈನ್ ಹಾಕಿ ಶಾಸ್ತ್ರಕ್ಕೆ ನೀರು ಬಿಟ್ಟಿದ್ದಾರೆ ಹೊರತು ಯಾವುದೇ ಪ್ರಯೋಜವಾಗಿಲ್ಲ. ಹೊನ್ನವಳ್ಳಿ ಕೆರೆಗಳಿಗೆ ಆದ್ಯತೆಯಲ್ಲಿ ನೀರು ತುಂಬಿಸಬೇಕೆಂದು ಒತ್ತಾಯಿಸಿದರೂ ಅನ್ಯಾಯ ಮಾಡಲಾಗುತ್ತಿದೆ. ಜನರು ಇಲ್ಲಿ ಬದುಕು ಸಾಗಿಸಲಾಗದೆ ಗುಳೆ ಹೋಗುತ್ತಿದ್ದಾರೆ. ಹಾಗಾಗಿ ಶಾಶ್ವತ ನೀರಾವರಿಗೆ ಒತ್ತಾಯಿಸಿ ಮತ ಬಹಿಷ್ಕಾರ ಚಳವಳಿಯನ್ನು ಆರಂಭಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ ತಿಳಿಸಿದರು.

ವ್ಯಕ್ತಿ ವಿಚಾರಣೆ

ಹೊನ್ನವಳ್ಳಿ ಗ್ರಾಮಸ್ಥರಿಗೆ ಪೋಸ್ಟರ್ ಮುದ್ರಿಸಿಕೊಟ್ಟಿದ್ದ ಜಯರಾಜ್ ಎಂಬ ಪ್ರಿಂಟಿಂಗ್ ಪ್ರೆಸ್ ಮಾಲೀಕನನ್ನು ತಾಲ್ಲೂಕು ಕಚೇರಿ ಸಿಬ್ಬಂದಿ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಜಯರಾಜ್ ಹಣ ಪಡೆದು ಪೊಸ್ಟರ್ ಮುದ್ರಿಸಿಕೊಟ್ಟಿದ್ದರು. ಆದರೆ, ತಾಲ್ಲೂಕು ಕಚೇರಿಯಲ್ಲಿ ಅವರಿಗೆ ‘ನೀವೇಕೆ ಪೋಸ್ಟರ್ ಮುದ್ರಿಸಿಕೊಟ್ಟಿದ್ದೀರಿ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ, ಕಾನೂನು ಬಾಹಿರ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತಷ್ಟು ಆಕ್ರೋಶಗೊಂಡು ಜಯರಾಜ್ ಅವರ ನೆರವಿಗೆ ನಿಂತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.