ADVERTISEMENT

ಮಹಾರಾಷ್ಟ್ರ: ಕಣಕ್ಕೆ ಇಳಿಯಲಿದೆ ಎಂಎನ್‌ಎಸ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:00 IST
Last Updated 30 ಸೆಪ್ಟೆಂಬರ್ 2019, 20:00 IST
   

ಮುಂಬೈ: ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್‌) ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಇದರಿಂದಾಗಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ರಂಗೇರುವ ಲಕ್ಷಣಗಳು ಗೋಚರಿಸಿವೆ.

ಸೋಮವಾರ ನಡೆದ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿ ರಾಜ್‌ ಅವರು ಈ ತೀರ್ಮಾನ ಕೈಗೊಂಡಿದ್ದಾರೆ. ‘ನಾವು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಮತ್ತು ಗೆಲುವನ್ನೂ ದಾಖಲಿಸುತ್ತೇವೆ. ಮುಂದಿನ ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುವುದು’ ಎಂದು ಅವರು ಹೇಳಿದರು.

ಮುಂಬೈ ನಗರ ವಲಯ, ಪುಣೆ ಮತ್ತು ನಾಸಿಕ್‌ ನಗರ ಪ್ರದೇಶಗಳ ಸುಮಾರು 120 ಕ್ಷೇತ್ರಗಳಲ್ಲಿ ಎಂಎನ್‌ಎಸ್‌ ಅಭ್ಯರ್ಥಿಗಳು ಕಣಕ್ಕೆ ಇಳಿಯುವ ನಿರೀಕ್ಷೆ ಇದೆ. ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಸೋದರ ಸಂಬಂಧಿ, ಶಿವಸೇನಾದಿಂದ ಹೊರಬಂದು ಪ್ರತ್ಯೇಕ ಸಂಘಟನೆಯನ್ನು ಕಟ್ಟಿದ ರಾಜ್‌ ಠಾಕ್ರೆ ಅವರು, ಅಕ್ಟೋಬರ್‌ 5ರಂದು ಸಾರ್ವಜನಿಕ ಸಭೆ ಏರ್ಪಡಿಸುವ ನಿರೀಕ್ಷೆ ಇದೆ. ಆದರೆ ಉದ್ಧವ್‌ ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಅವರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ADVERTISEMENT

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ. ಆದರೆ ರಾಜ್‌ ಅವರು ರಾಜ್ಯದಲ್ಲಿ 10ಕ್ಕೂ ಹೆಚ್ಚು ರ್‍ಯಾಲಿಗಳನ್ನು ಆಯೋಜಿಸಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಹಾಗೂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಆದಿತ್ಯ ಠಾಕ್ರೆ ಸ್ಪರ್ಧೆ ಖಚಿತ

ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಸೋಮವಾರ ಘೋಷಿಸಿದ್ದಾರೆ. ಆ ಮೂಲಕ ಅವರು ಠಾಕ್ರೆ ಕುಟುಂಬದಿಂದ ಚುನಾವಣಾ ರಾಜಕಾರಣಕ್ಕೆ ಇಳಿಯುವ ಮೊದಲ ವ್ಯಕ್ತಿ ಎನಿಸಲಿದ್ದಾರೆ.

ಇಲ್ಲಿ ಆಯೋಜಿಸಿದ್ದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡುತ್ತಾ ಮುಂಬೈಯ ವರ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ ಅವರು, ‘ನಿಮ್ಮೆಲ್ಲರ ಆಶೀರ್ವಾದ ಇರುವುದರಿಂದ ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ’ ಎಂದರು. ವರ್ಲಿ ಕ್ಷೇತ್ರದಲ್ಲಿ ಶಿವಸೇನಾದವರೇ ಆದ ಸುನಿಲ್‌ ಶಿಂಧೆ ಶಾಸಕರಾಗಿದ್ದು, ಈ ಬಾರಿ ಅವರು ಈ ಕ್ಷೇತ್ರವನ್ನು ಬಿಟ್ಟುಕೊಡಲಿದ್ದಾರೆ. 1966ರಲ್ಲಿ ಬಾಳಾಸಾಹೇಬ ಠಾಕ್ರೆ ಅವರು ಶಿವಸೇನಾ ಆರಂಭಿಸಿದ್ದರು. ಅಲ್ಲಿಂದ ಈವರೆಗೂ ಅವರ ಕುಟುಂಬದ ಯಾವ ಸದಸ್ಯನೂ ಚುನಾವಣೆಗೆ ಸ್ಪರ್ಧಿಸಿಲ್ಲ ಮತ್ತು ಯಾವುದೇ ಸಾಂವಿಧಾನಿಕ ಹುದ್ದೆಯನ್ನೂ ಹೊಂದಿರಲಿಲ್ಲ. ಆದರೆ ಈಗ, ‘ಶಿವಸೇನಾ ಹೆಚ್ಚು ಸ್ಥಾನಗಳನ್ನು ಪಡೆದರೆ ಆದಿತ್ಯ ಠಾಕ್ರೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ’ ಎಂದೂ ಪಕ್ಷ ಹೇಳಿಕೊಂಡಿದೆ.

ಸೀಟು ಹಂಚಿಕೆಗೆ ಅಂಕಿತ

‘ಬಿಜೆಪಿ– ಶಿವಸೇನಾ ಸೀಟು ಹಂಚಿಕೆ ಒಪ್ಪಂದ ಅಂತಿಮಗೊಂಡಿದೆ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ, ಸಚಿವ ಚಂದ್ರಕಾಂತ ಪಾಟೀಲ ಸೋಮವಾರ ತಿಳಿಸಿದರು. ಸಿ.ಎಂ ದೇವೇಂದ್ರ ಫಡಣವೀಸ್‌ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಒಪ್ಪಂದದ ವಿವರಗಳನ್ನು ನೀಡುವರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.