ADVERTISEMENT

ಮೈತ್ರಿ ಮುಖಂಡರ ಮಾತುಕತೆ ಬಿರುಸು..!

ಗೃಹ ಸಚಿವ ಎಂ.ಬಿ.ಪಾಟೀಲ ಜತೆ ಚರ್ಚೆ; ಆರೋಗ್ಯ ಸಚಿವ ಶಿವಾನಂದ ಪಾಟೀಲ ಜತೆ ಮಾತುಕತೆ ಇಂದು

ಡಿ.ಬಿ, ನಾಗರಾಜ
Published 1 ಏಪ್ರಿಲ್ 2019, 19:46 IST
Last Updated 1 ಏಪ್ರಿಲ್ 2019, 19:46 IST
   

ವಿಜಯಪುರ:ಬಿಸಿಲ ಝಳ ಹೆಚ್ಚಿದಂತೆ, ಲೋಕಸಭಾ ಚುನಾವಣಾ ಕಣವೂ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎರಡು ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಮತ್ತೆ ತಮ್ಮ ಸುಪರ್ದಿಗೆ ಪಡೆಯಲು ‘ಮೈತ್ರಿ’ ಪಡೆ ಕಸರತ್ತು ಆರಂಭಿಸಿದೆ.

ಗೃಹ ಸಚಿವ ಎಂ.ಬಿ.ಪಾಟೀಲ ವಿಜಯಪುರಕ್ಕೆ ಬರುತ್ತಿದ್ದಂತೆ ಮೈತ್ರಿ ಅಭ್ಯರ್ಥಿಯ ಪತಿ, ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪಾಟೀಲ ನಿವಾಸಕ್ಕೆ ದೌಡಾಯಿಸಿ, ಚುನಾವಣೆಯ ಚರ್ಚೆ ನಡೆಸಿದರು ಎಂಬುದು ತಿಳಿದು ಬಂದಿದೆ.

ಒಂದು ತಾಸಿಗೂ ಹೆಚ್ಚಿನ ಅವಧಿ ಮುಖಂಡರು ಚುನಾವಣೆಯ ಬಗ್ಗೆ ಚರ್ಚಿಸಿದರು. ದೋಸ್ತಿ ಹೊಂದಾಣಿಕೆಯನ್ನು ಜಿಲ್ಲಾ ಹಂತದಲ್ಲೂ ಮತ್ತಷ್ಟು ಗಟ್ಟಿ ಮಾಡಿಕೊಳ್ಳಲಿಕ್ಕಾಗಿ, ‘ಸಮನ್ವಯ ಸಮಿತಿ’ಯೊಂದನ್ನು ರಚಿಸಿಕೊಂಡು, ಅದರಡಿ ಚುನಾವಣೆ ಎದುರಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡರು ಎನ್ನಲಾಗಿದೆ.

ADVERTISEMENT

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಸಭೆಯ ಮಧ್ಯದಲ್ಲಿ ಪ್ರವೇಶಿಸಿದರು. ಈ ಸಂದರ್ಭ ಎಂ.ಬಿ.ಪಾಟೀಲ ಪ್ರಮುಖ ಸಲಹೆಗಳನ್ನು ತಮ್ಮ ಪಕ್ಷದ ಅಧ್ಯಕ್ಷರಿಗೆ ನೀಡಿದರು. ಎಲ್ಲಾ ಬ್ಲಾಕ್‌ಗಳಲ್ಲೂ ಚುನಾವಣಾ ಚಟುವಟಿಕೆ ಚುರುಕುಗೊಳಿಸುವಂತೆ ಸೂಚಿಸಿದರು ಎಂಬುದು ಗೊತ್ತಾಗಿದೆ.

‘ವಿನಯ ಕುಲಕರ್ಣಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದ್ದು, ಅಲ್ಲಿಗೂ ಒತ್ತು ನೀಡಬೇಕು. ಲಿಂಗಾಯತ ಪ್ರಾಬಲ್ಯವಿರುವ ಬೀದರ್‌ನಲ್ಲೂ ಈ ಬಾರಿ ಗೆಲ್ಲಬೇಕು. ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವೆ ಎಂದು ಜೆಡಿಎಸ್‌ ಮುಖಂಡರಿಗೆ ಎಂ.ಬಿ.ಪಾಟೀಲ ತಿಳಿಸಿದ್ದಕ್ಕೆ; ವಿಜಯಪುರದಲ್ಲೂ ಮೈತ್ರಿ ಅಭ್ಯರ್ಥಿ ಗೆಲ್ಲಲೇಬೇಕಿದೆ. ಹೆಚ್ಚಿನ ಆದ್ಯತೆಯನ್ನು ಇಲ್ಲಿಗೆ ನೀವು ನೀಡಬೇಕು ಎಂದು ಮುಖಂಡರು ಕೇಳಿಕೊಂಡರು’ ಎಂಬುದು ತಿಳಿದು ಬಂದಿದೆ.

‘ಆರೋಗ್ಯ ಸಚಿವ ಶಿವಾನಂದ ಪಾಟೀಲ ಜತೆಯೂ ಮೊಬೈಲ್‌ನಲ್ಲೇ ಜೆಡಿಎಸ್‌ ಮುಖಂಡರು ಚರ್ಚಿಸಿದ್ದಾರೆ. ಈ ಸಂದರ್ಭ ಶಿವಾನಂದ ಸೋಮವಾರ ವೀಣಾ ನಾಮಪತ್ರ ಸಲ್ಲಿಕೆಗಾಗಿ ಬಾಗಲಕೋಟೆಗೆ ಬರುವೆ. ಇದೇ ಸಂದರ್ಭ ವಿಜಯಪುರಕ್ಕೆ ಬಂದು ಉಳಿಯುವೆ. ಮಂಗಳವಾರ ಭೇಟಿಯಾಗೋಣ ಎಂದು ಸಮಯ ನಿಗದಿಪಡಿಸಿದರು’ ಎಂದು ಜಿಲ್ಲಾ ಜೆಡಿಎಸ್‌ನ ಮುಖಂಡರೊಬ್ಬರು ತಿಳಿಸಿದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಂಗಳವಾರ ಮುಂಜಾನೆ ಶಿವಾನಂದ ಜತೆ ಚರ್ಚಿಸಿ, ಚುನಾವಣಾ ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

‘ನಾಗಠಾಣ ಶಾಸಕ ದೇವಾನಂದ ಚವ್ಹಾಣ ಈಗಾಗಲೇ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೆಂಬಲ ಕೋರಿದ್ದಾರೆ. ಇದೇ ರೀತಿ ಟಿಕೆಟ್ ಆಕಾಂಕ್ಷಿಯಾಗಿದ್ದ ವಿಠ್ಠಲ ಕಟಕದೊಂಡರನ್ನು ಸಂಪರ್ಕಿಸಿ, ಮನವಿ ಮಾಡಿಕೊಂಡಿದ್ದಾರೆ. ಇನ್ನೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಪ್ರೊ.ರಾಜು ಆಲಗೂರ ನೇರ ಭೇಟಿಗೆ ಸಮಯ ನಿಗದಿಪಡಿಸಿಕೊಂಡಿದ್ದಾರೆ’ ಎಂದು ಜೆಡಿಎಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.