ADVERTISEMENT

ಪೋಷಕರಿಗೆ ಮತದಾನದ ಅರಿವು ಮೂಡಿಸಿ: ವಿದ್ಯಾರ್ಥಿಗಳಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:58 IST
Last Updated 1 ಏಪ್ರಿಲ್ 2019, 14:58 IST
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ಮತದಾನ ಜಾಗೃತಿ ಅಭಿಯಾನದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಸ್ವೀಕರಿಸಿದರು.   

ಕೋಲಾರ: ‘ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪೋಷಕರಿಗೆ ಅರಿವು ಮೂಡಿಸಿ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ವೀಪ್ ಸಮಿತಿಯು ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನದಲ್ಲಿ ಮಾತನಾಡಿ, ‘ಪ್ರತಿಯೊಬ್ಬ ಮತದಾರರು ತಪ್ಪದೇ ಮತ ಹಾಕಬೇಕು. ಮುಂದಿನ ಮೂರ್ನಾಲ್ಕು ವರ್ಷದಲ್ಲಿ ನಿಮಗೂ 18 ವರ್ಷ ತುಂಬಿ ಮತದಾರರಾಗುತ್ತೀರಿ. ಹೀಗಾಗಿ ಮತದಾನದ ಅರಿವು ಮುಖ್ಯ’ ಎಂದರು.

‘ಮತದಾನ ದೇಶದ ಅಭಿವೃದ್ಧಿ ಹಾಗೂ ಸಮಗ್ರ ನಾಯಕತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾರ್ಯ, ಹೀಗಾಗಿ ಇದನ್ನು ಕಡೆಗಣಿಸಬಾರದು, ಈ ಬಗ್ಗೆ ಪೋಷಕರಿಗೆ ತಿಳಿ ಹೇಳಿ ಮತದಾನ ಮಾಡುವಂತೆ ಪ್ರೇರೇಪಿಸಿ’ ಎಂದು ಮನವಿ ಮಾಡಿದರು.

ADVERTISEMENT

‘ಹಣ ಅಥವಾ ಹೆಂಡದ ಆಮಿಷಕ್ಕೆ ಒಳಗಾಗಿ ಮತ ಹಾಕಬಾರದು. ನೈತಿಕ ಮತದಾನ ಎಲ್ಲರ ಜವಾಬ್ದಾರಿಯಾಗಬೇಕು. ಮತದಾರರ ಆಯ್ಕೆ ದೇಶದ ದೃಷ್ಟಿಯಿಂದ ಒಳಿತನ್ನೇ ಕಾಣುವಂತಿರಬೇಕು. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಪೋಷಕರ ಮನವೊಲಿಸಿ ಶೇ 100ರಷ್ಟು ಮತದಾನವಾಗುವಂತೆ ಮಾಡಬಹುದು. ದೇಶ ಕಟ್ಟುವ ಕಾಯಕದಲ್ಲಿ ಪಾಲ್ಗೊಳ್ಳಲು ಇದು ಸದಾವಕಾಶ’ ಎಂದು ಸಲಹೆ ನೀಡಿದರು.

‘ಮತಕ್ಕಾಗಿ ಯಾರಾದರೂ ಹಣದ ಆಮಿಷ ಒಡ್ಡುತ್ತಿರುವುದು ಗಮನಕ್ಕೆ ಬಂದರೆ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ತಿಳಿಸಿ. ದೇಶದ ಸಮಗ್ರ ಅಭಿವೃದ್ಧಿ ಮತ್ತು ಜನೋಪಯೋಗಿ ಕೆಲಸಗಳಿಗಾಗಿ ಉತ್ತಮ ಜನ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ಚಲಾಯಿಸಬೇಕು. ಮತದಾನದ ಮೂಲಕ ಆದರ್ಶ ಸಮಾಜ ಕಟ್ಟಿಕೊಳ್ಳಬಹುದೆಂದು ಮತದಾರರಿಗೆ ತಿಳಿಸಿಕೊಡಿ’ ಎಂದರು.

‘ಅಕ್ಕಪಕ್ಕದ ಮನೆಗಳಲ್ಲಿನ ಮತದಾರರಿಗೂ ತಿಳಿ ಹೇಳಿ. ಮತದಾನ ದಿನದಂದು ರಜೆಯಿದೆ ಎಂಬ ಕಾರಣಕ್ಕೆ ಪೋಷಕರು ಪ್ರವಾಸ ಹೋಗಲು ಚಿಂತಿಸಿದ್ದರೆ ಅದಕ್ಕೆ ತಡೆಯೊಡ್ಡಿ’ ಎಂದು ಕೋರಿದರು.

ಚರ್ಚಾ ಸ್ಪರ್ಧೆ: ವಿದ್ಯಾರ್ಥಿಗಳಾದ ಸಿಂಧೂ, ಭವ್ಯಾ, ಮಧುಶ್ರೀ, ಎಂ.ರಕ್ಷಿತಾ, ರವಿಕುಮಾರ್ ಮತದಾನ ಕುರಿತ  ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಶಿಕ್ಷಕ ಎಸ್.ಅನಂತಪದ್ಮನಾಭ್ ಕಡ್ಡಾಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕಿ ಫರೀದಾ ಮತದಾನದ ಮಹತ್ವ ಮತ್ತು ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.

ಶಿಕ್ಷಕರಾದ ಸತೀಶ್ ಎಸ್.ನ್ಯಾಮತಿ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ವೆಂಕಟರೆಡ್ಡಿ, ವಸಂತಮ್ಮ, ಸಿ.ಎಲ್.ಶ್ರೀನಿವಾಸಲು, ನಾರಾಯಣಸ್ವಾಮಿ, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.