ADVERTISEMENT

ಬೆಂಗಳೂರು ದಕ್ಷಿಣಕ್ಕೆ ಮೋದಿ, ಗ್ರಾಮಾಂತರಕ್ಕೆ ರಾಹುಲ್‌ !

ಎರಡೂ ಪಕ್ಷಗಳ ಕಾರ್ಯಕರ್ತರನ್ನು ರೋಮಾಂಚನಗೊಳಿಸಿದ ವದಂತಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 20:15 IST
Last Updated 22 ಮಾರ್ಚ್ 2019, 20:15 IST
   

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಡಿದೆ.

ಉತ್ತರ ಪ್ರದೇಶದ ವಾರಾಣಸಿಯಿಂದ ಪ್ರಧಾನಿ ಮೋದಿ ಸ್ಪರ್ಧಿಸುವುದು ಖಚಿತ. ಎರಡನೇ ಕ್ಷೇತ್ರವನ್ನಾಗಿ ಬಿಜೆಪಿ ಭದ್ರಕೋಟೆ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಆಯ್ಕೆ ಮಾಡಬಹುದು ಎಂಬ ಮಾತು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಆದರೆ, ರಾಜ್ಯದ ಬಿಜೆಪಿ ವರಿಷ್ಠರು ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಬಿಜೆಪಿ ತನ್ನ ಮೊದಲನೇ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿ ಹೆಸರನ್ನು ಪ್ರಕಟಿಸದೇ ಇರಲು ಮೋದಿ ಇಲ್ಲಿಂದ ಸ್ಪರ್ಧಿಸಲು ಬಯಸಿರುವುದೇ ಕಾರಣ. ಮೋದಿ ಸ್ಪರ್ಧಿಸಿದರೆ ಸದ್ಯ ಕಾಂಗ್ರೆಸ್‌–ಜೆಡಿಎಸ್‌ ಹಿಡಿತದಲ್ಲಿರುವ ಸುತ್ತಮುತ್ತಲ ಲೋಕಸಭಾ ಕ್ಷೇತ್ರಗಳು ಕಮಲ ತೆಕ್ಕೆಗೆ ಬರಲಿವೆ ಎಂಬ ಲೆಕ್ಕಾಚಾರ ಇದೆ ಎಂಬ ವಾದವೂ ಕೇಳಿ ಬಂದಿದೆ.

ADVERTISEMENT

ಎರಡನೇ ಕ್ಷೇತ್ರವನ್ನಾಗಿ ಒಡಿಶಾದ ಪುರಿ ಅಥವಾ ಪಶ್ಚಿಮ ಬಂಗಾಳದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಬಿಜೆಪಿ ಆ ರಾಜ್ಯಗಳಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಆದ್ದರಿಂದ, ದಕ್ಷಿಣಕ್ಕಿಂತ ಪೂರ್ವ ಭಾಗದತ್ತ ಅವರು ಹೆಚ್ಚಿನ ಗಮನಹರಿಸುವ ಸಾಧ್ಯತೆ ಇದೆ ಎಂದೂ ಬಿಜೆಪಿ ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಅವರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಲಾಗಿದೆ. ಈಗಾಗಲೇ ಕಣಕ್ಕಿಳಿಯಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ಪಟ್ಟಿಯಲ್ಲಿ ಅವರ ಹೆಸರು ಪ್ರಕಟಗೊಳ್ಳದೇ ಇರುವುದು ಇಂತಹ ಊಹಾಪೋಹಗಳಿಗೆ ಕಾರಣವಾಗಿದೆ ಎಂದೂ ಮೂಲಗಳು ಹೇಳಿವೆ.

ಗ್ರಾಮಾಂತರಕ್ಕೆ ರಾಹುಲ್‌:ರಾಹುಲ್‌ ಗಾಂಧಿ ರಾಜ್ಯದಿಂದ ಸ್ಪರ್ಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮನವಿ ಮಾಡಿದ್ದರು.

ಅಮೇಠಿಯಿಂದ ರಾಹುಲ್‌ಗೆ ಬಿಜೆಪಿಯ ಸ್ಮೃತಿ ಇರಾನಿ ಕಠಿಣ ಸ್ಪರ್ಧೆ ಒಡ್ಡುತ್ತಿರುವುದರಿಂದ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಈ ಚರ್ಚೆ ನಡೆದಿದೆ. ಈ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್ ಅಥವಾ ಅವರ ಪುತ್ರಿ ನಿಶಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಇದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಒಂದು ವೇಳೆ ರಾಹುಲ್ ಗಾಂಧಿ ಕಣಕ್ಕೆ ಇಳಿದರೆ, ಬೇರೆ ಅಭ್ಯ್ರಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಸಲಹೆಗಳು ಬಂದಿದ್ದರಿಂದಾಗಿ ಬಿಜೆಪಿ ನಾಯಕರು ಈ ಕ್ಷೇತ್ರದ ಆಯ್ಕೆಯನ್ನು ಅಂತಿಮಗೊಳಿಸಲಿಲ್ಲ ಎಂದು ಮೂಲಗಳು ಹೇಳಿವೆ.

ಗ್ರಾಮಾಂತರ ಕ್ಷೇತ್ರ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 4 ಕಾಂಗ್ರೆಸ್‌, 3 ಜೆಡಿಎಸ್‌ 1 ಬಿಜೆಪಿ ಹಿಡಿತದಲ್ಲಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಥವಾ ಕಾಂಗ್ರೆಸ್‌ ಯಾವತ್ತೂ ಪ್ರಾಬಲ್ಯ ಸಾಧಿಸಿವೆ. ಹೀಗಾಗಿ ರಾಹುಲ್ ಸ್ಪರ್ಧಿಸಿದರೆ ಗೆಲುವು ಸಲೀಸು ಎಂಬುದು ಇದರ ಹಿಂದಿನ ಲೆಕ್ಕಾಚಾರ ಎನ್ನಲಾಗುತ್ತಿದೆ.

ಆದರೆ, ಅಮೇಠಿ ಬಿಟ್ಟು ಗ್ರಾಮಾಂತರಕ್ಕೆ ಬರಲು ರಾಹುಲ್ ಸಿದ್ಧರಿಲ್ಲ ಎಂದು ಆ ಪಕ್ಷದ ಮೂಲಗಳು ಹೇಳಿವೆ.

* ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ವದಂತಿಗಳನ್ನು ಹರಡಲಾಗಿದೆ

-ಬಿ.ಎಸ್‌.ಯಡಿಯೂರಪ್ಪ, ಅಧ್ಯಕ್ಷ, ರಾಜ್ಯ ಬಿಜೆಪಿ

* ಕರ್ನಾಟಕದಿಂದ ಸ್ಪರ್ಧಿಸುವಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದೆವು. ಅವರು ಒಲವು ತೋರಲಿಲ್ಲ

-ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.