ADVERTISEMENT

ದಾವಣಗೆರೆ ಲೋಕಸಭಾ ಕ್ಷೇತ್ರ: ಸಂಸದರ ಪತ್ನಿ ಸೇರಿ ಇಬ್ಬರ ನಾಮಪತ್ರ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:19 IST
Last Updated 5 ಏಪ್ರಿಲ್ 2019, 13:19 IST

ದಾವಣಗೆರೆ: ಲೋಕಸಭಾ ಚುನಾವಣೆಯ ದಾವಣಗೆರೆ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ಒಟ್ಟು 36 ನಾಮಪತ್ರಗಳ ಪೈಕಿ ಮೂರು ನಾಮಪತ್ರಗಳು ಶುಕ್ರವಾರ ತಿರಸ್ಕೃತಗೊಂಡಿವೆ.

ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್‌. ಶಿವಮೂರ್ತಿ ನೇತೃತ್ವದಲ್ಲಿ ಗುರುವಾರ ನಾಮಪತ್ರಗಳನ್ನು ಪರಿಶೀಲಿಸಲಾಯಿತು.

ಬಿಜೆಪಿ ಅಭ್ಯರ್ಥಿಯಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಜಿ.ಎಸ್‌. ಗಾಯತ್ರಿ ಅವರು ಸಲ್ಲಿಸಿದ್ದ ಎರಡು ನಾಮಪತ್ರಗಳು ತಿರಸ್ಕೃತಗೊಂಡವು. ಅಗತ್ಯ ಪ್ರಮಾಣದಷ್ಟು ಸೂಚಕರು ಇಲ್ಲದಿರುವುದರಿಂದ ನಾಮಪತ್ರಗಳನ್ನು ಅಸಿಂಧುಗೊಳಿಸಲಾಯಿತು. ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದ ಸಿದ್ದೇಶ್ವರ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದಾಗ ಪಕ್ಷದ ನಾಯಕರು ನಿಟ್ಟುಸಿರು ಬಿಟ್ಟರು.

ADVERTISEMENT

ಅದೇ ರೀತಿ ಅಗತ್ಯ ಸಂಖ್ಯೆಯಷ್ಟು ಸೂಚಕರು ಇಲ್ಲದಿರುವುದರಿಂದ ಸಂಪೂರ್ಣ ಭಾರತ ಕ್ರಾಂತಿ ಪಾರ್ಟಿಯ ಕೆ.ವಿ. ಕೃಷ್ಣಮೂರ್ತಿ ಅವರ ಒಂದು ನಾಮಪತ್ರವನ್ನೂ ತಿರಸ್ಕರಿಸಲಾಗಿದೆ.

ಮಾ. 28ರಿಂದ ಏ.4ರವರೆಗೆ 28 ಅಭ್ಯರ್ಥಿಗಳಿಂದ ಒಟ್ಟು 36 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳ ಪೈಕಿ ಕಾಂಗ್ರೆಸ್‌ನ ಎಚ್‌.ಬಿ. ಮಂಜಪ್ಪ ಸೇರಿ ಒಟ್ಟು 26 ಅಭ್ಯರ್ಥಿಗಳ 33 ನಾಮಪತ್ರಗಳು ಕ್ರಮಬದ್ಧವಾಗಿವೆ.

ಏಪ್ರಿಲ್‌ 8 ಉಮೇದುವಾರಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಏಪ್ರಿಲ್‌ 23ಕ್ಕೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬೀಳಲಿದೆ.

ನಾಮಪತ್ರ ಪರಿಶೀಲನೆಗೆ ತಮ್ಮ ಏಜೆಂಟರನ್ನು ಕಳುಹಿಸಿದ್ದ ಜಿ.ಎಂ. ಸಿದ್ದೇಶ್ವರ ಹಾಗೂ ಎಚ್‌.ಬಿ. ಮಂಜಪ್ಪ ಅವರು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.