ADVERTISEMENT

ಡೋಂಗಿ ಜಾತ್ಯಾತೀತರಿಗೆ ತಕ್ಕ ಪಾಠ: ಕೆ.ನಯಾಜ್ ಅಹಮದ್

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:16 IST
Last Updated 9 ಏಪ್ರಿಲ್ 2019, 14:16 IST

ತುಮಕೂರು: ಸ್ವಾತಂತ್ರ್ಯ ಬಂದ ದಿನದಿಂದ ಕಾಂಗ್ರೆಸ್ ಪಕ್ಷವನ್ನು ಅಲ್ಪಸಂಖ್ಯಾತರು ಬೆಂಬಲಿಸುತ್ತಿದ್ದಾರೆ. ಇದರಿಂದ ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ. ಅಭಿವೃದ್ಧಿಗಾಗಿ ಡೋಂಗಿ ಜಾತ್ಯಾತೀತ ಪಕ್ಷಗಳಿಗೆ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಅಲ್ಪಸಂಖ್ಯಾತರ ಪ್ರಗತಿಪರ ಸಮಾನ ಮನಸ್ಕರ ವೇದಿಕೆಯ ಕೆ.ನಯಾಜ್ ಅಹಮದ್ ನುಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಅಭಿವೃದ್ಧಿ ರಾಜಕೀಯ ಪಕ್ಷಗಳ ಓಲೈಕೆಯಿಂದ ಕುಂಠಿತವಾಗಿದೆ. ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅದನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದೇ ಇರುವುದರಿಂದ ಯುವ ಸಮುದಾಯ ಡೋಂಗಿ ಜಾತ್ಯಾತೀತ ಪಕ್ಷಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ ಎಂದರು.

ಕೋಮುದಳ್ಳುರಿಯಿಂದ ನಲುಗಿದ್ದ ಭಾರತಕ್ಕೆ ಹೊಸ ದಾರಿ ತೋರಿದವರು ವಾಜಪೇಯಿ. ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರು ಸುಖವಾಗಿದ್ದಾರೆ. ಅಲ್ಪಸಂಖ್ಯಾತರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.

ADVERTISEMENT

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಡೋಂಗಿ ಜಾತ್ಯಾತೀತ ಸರ್ಕಾರ ಅಲ್ಪಸಂಖ್ಯಾತರನ್ನು ಚುನಾವಣೆ ವೇಳೆಯಲ್ಲಿ ಮಾತ್ರ ನೆನಪಿಸಿಕೊಳ್ಳುತ್ತದೆ. ಅಂತಹ ಡೋಂಗಿಗಳ ಬಗ್ಗೆ ಎಚ್ಚರವಹಿಸಿ ಮತ ಚಲಾಯಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಲ್ಪಸಂಖ್ಯಾತರ ಪರ ಸಹಾನುಭೂತಿ ಹೊಂದಿದ್ದಾರೆ. ಅವರಿಗೆ ಮತ ನೀಡುವಂತೆ ವೇದಿಕೆ ವತಿಯಿಂದ ಪ್ರಚಾರ ಮಾಡಲಾಗುವುದು ಎಂದು ಹೇಳಿದರು.

ಬಿಜೆಪಿ ಮುಖಂಡ ಶಬ್ಬೀರ ಅಹಮದ್, ರಫೀವುಲ್ಲಾ ಖಾನ್, ಇಮ್ರಾನ್, ಅಬ್ದುಲ್ ವಹೀದ್ ಪಾಷಾ, ಸನಾವುಲ್ಲಾ ಖಾನ್, ಇನಾಯತ್ ಪಾಷಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.