ADVERTISEMENT

‘ಮೈತ್ರಿ’ ಯಿಂದ ಯಾರಿಗೂ ಉಳಿಗಾಲವಿಲ್ಲ: ಬಿಜೆಪಿ ಅಭ್ಯರ್ಥಿ ಎ.ಮಂಜು

ಹಾಸನ ಲೋಕಸಭಾ ಕ್ಷೇತ್ರ

ಕೆ.ಎಸ್.ಸುನಿಲ್
Published 2 ಮೇ 2019, 15:23 IST
Last Updated 2 ಮೇ 2019, 15:23 IST
ಎ.ಮಂಜು
ಎ.ಮಂಜು   

ಹಾಸನ: ಮೊದಲಿನಿಂದಲೂ ಗೌಡರ ಕುಟುಂಬ ವಿರೋಧಿಯಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಎ.ಮಂಜು, ಕಳೆದ ವಿಧಾನಸಭೆ ಸೋಲಿನ ಕಹಿ ಮರೆಯಲೆಂದು ಮಾತೃಪಕ್ಷ ಬಿಜೆಪಿಗೆ ಜಿಗಿದಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ದೊಡ್ಡಗೌಡರ ವಿರುದ್ಧ ತೊಡೆತಟ್ಟಿದ್ದ ಮಂಜು, ಈ ಬಾರಿ ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣಗೆ ಎದುರಾಳಿಯಾಗಿ ನಿಂತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕುರಿತು ತಮ್ಮ ಮುಂದಿನ ಯೋಜನೆ, ನಿಲುವುಗಳನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡಿದ್ದಾರೆ.

* ಸಚಿವರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಆರೋಪ ಮಾಡುತ್ತಿದ್ದಾರೆ?

ADVERTISEMENT

ನಾನು ಎರಡು ವರ್ಷ ಸಚಿವನಾಗಿ ಸೇವೆ ಸಲ್ಲಿಸಿದೆ. ಅಮೃತ್‌ ಯೋಜನೆಯಲ್ಲಿ ಹಾಸನಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ, ರಸ್ತೆ ಕಾಮಗಾರಿ ಸೇರಿ ₹ 6 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯ ನಡೆದಿದೆ. ಸ್ವಕ್ಷೇತ್ರ ಅರಕಲಗೂಡಿನಲ್ಲೇ ₹ 2, 500 ಕೋಟಿ ಅಭಿವೃದ್ಧಿ ಕೆಲಸ ಆಗಿದೆ. ಎತ್ತಿನಹೊಳೆ ಯೋಜನೆ ಅನುದಾನ ಬಿಡುಗಡೆಗೆ ಶ್ರಮಿಸಿದ್ದೇನೆ. ಅವರ ವೈಪಲ್ಯ ಮುಚ್ಚಿ ಹಾಕಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.

* ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ ಇದೆ? ಕುಟುಂಬ ರಾಜಕಾರಣ ಇಟ್ಟುಕೊಂಡು ಮತಯಾಚಿಸುತ್ತಿದ್ದೀರಾ?

ಕುಟುಂಬ ರಾಜಕಾರಣ ಇಟ್ಟುಕೊಂಡು ಮತಯಾಚಿಸುತ್ತಿಲ್ಲ. ದೇವೇಗೌಡರ ಕುಟುಂಬದಿಂದ ಸ್ಪರ್ಧಿಸಿರುವ ಅಭ್ಯರ್ಥಿಗೆ ಅವಕಾಶ ಕೊಡಬೇಡಿ ಎನ್ನುತ್ತಿದ್ದೇನೆ. ಏಕೆಂದರೆ ವಂಶಪಾರಂಪರೆ ಮುಂದುವರೆಯುತ್ತದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನ ಎರಡನೇ ಹಂತದ ನಾಯಕರಿಗೆ ಅವಕಾಶ ಸಿಗಬೇಕೆಂದರೆ ಕುಟುಂಬ ರಾಜಕಾರಣ ಕೊನೆಗಾಣಿಸಬೇಕು.

ಜಿಲ್ಲೆಯಲ್ಲಿ ಎರಡು ಜಲಾಶಯ ಇದ್ದರೂ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಅವರ್‍ಯಾರು ಯೋಚಿಸಿರಲಿಲ್ಲ. ಆದ್ದರಿಂದ ಕುಡಿಯುವ ನೀರು ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು.

* ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಹೇಳುತ್ತೀರಾ. ಆದರೆ, ಬಿಜೆಪಿಯವರು ಐಐಟಿ ಅಗತ್ಯವಿಲ್ಲಾ ಎಂದು ಪ್ರತಿಪಾದಿಸುತ್ತಿದ್ದಾರೆ?

ಐಐಟಿ ಬೇಡವೆಂದು ಹೇಳಿಲ್ಲ. ಹಿಂದಿನ ಸರ್ಕಾರಗಳು ರೈತರ ಜಮೀನು ಸ್ವಾಧೀನ ಪಡಿಸಿಕೊಂಡಿವೆ. ಪ್ರಧಾನಿಯಾಗಿದ್ದಾಗ ದೇವೇಗೌಡರಿಗೆ ಐಐಟಿ ಮಂಜೂರು ಮಾಡುವ ಅವಕಾಶ ಇದ್ದರೂ ಮಾಡಲಿಲ್ಲ. ಈಗ ಬೇರೆ ಜಿಲ್ಲೆಗೆ ಮಂಜೂರಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇತರೆ ಜೆಲ್ಲೆಗೂ ಅವಕಾಶ ಸಿಗಬಹುದು.

* ಮಂಜು ಅವರು ಪಕ್ಷಾಂತರಿ ಮತ್ತು ಅವಕಾಶವಾದಿ ರಾಜಕಾರಣಿ ಎಂಬ ಅಪವಾದ ಇದೆಯಲ್ಲ ?

ಅವಕಾಶವಾದಿ ರಾಜಕಾರಣಿಯಂತೂ ಅಲ್ಲ. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಯಿಂದ ಯಾರಿಗೂ ಉಳಿಗಾಲವಿಲ್ಲ. ಅದರಲ್ಲೂ ಕಾಂಗ್ರೆಸ್‌ಗೆ ಅನಾನುಕೂಲವೇ ಹೆಚ್ಚು. ಜೆಡಿಎಸ್‌ಗೆ ಹೆಚ್ಚು ಅನುಕೂಲವಾಗುವುದು. ಕಾಂಗ್ರೆಸ್‌ನ ತಳ ಮಟ್ಟದ ಕಾರ್ಯಕರ್ತರು ಮತ್ತು ಮತದಾರರ ಅಭಿಪ್ರಾಯ ಪಡೆದು ಪಕ್ಷ ತ್ಯಜಿಸುವ ತೀರ್ಮಾನ ಕೈಗೊಂಡೆ. ಅಣ್ಣೇಗೌಡರ ಮಗ ಮಂಜು ಕಾಂಗ್ರೆಸ್‌ನಲ್ಲಿದ್ದರೂ ಅಷ್ಟೇ, ಬಿಜೆಪಿಯಲ್ಲಿದ್ದರೂ ಅಷ್ಟೇ. ತತ್ವ, ಸಿದ್ಧಾಂತದಲ್ಲಿ ಬದಲಾವಣೆ ಇಲ್ಲ.

* ಮೋದಿ ಮುಖ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ. ಜನ ನಿಮಗೇ ಏಕೆ ಮತ ಹಾಕಬೇಕು?

ದೇಶದ ಭದ್ರತೆ ದೃಷ್ಟಿಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬುದು ಜನರ ಭಾವನೆ. ಹಿಂದುಳಿದ ವರ್ಗಕ್ಕೆ ಸೇರಿದ ಅವರು, ದೇಶವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಪಾಕಿಸ್ತಾನದ ಪ್ರಧಾನಿ ಸಹ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಹೇಳಿಕೆ ಒಳ್ಳೆಯ ಬೆಳವಣಿಗೆ.

ಜಿಲ್ಲೆಯಲ್ಲಿ ಕಾಡಾನೆ ಹಾವಳಿ, ಮರಳು ದಂಧೆ, ಕುಡಿಯುವ ನೀರು, ಏತ ನೀರಾವರಿ ಯೋಜನೆ ಸೇರಿದಂತೆ ಹಲವು ಸಮಸ್ಯೆ ಇದೆ. ನನಗೆ ದೊರೆತ ಅವಕಾಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ರಾಜಕಾರಣಿಗೆ ಬದ್ಧತೆ, ಗುರಿ ಇರಬೇಕು. ಎಲ್ಲದಕ್ಕಿಂತ ಇಚ್ಚಾಶಕ್ತಿ ಇರಬೇಕು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಮನವಿ ಮಾಡುತ್ತೇನೆ.

* ಮೈತ್ರಿ ಅಭ್ಯರ್ಥಿ ಪರಿಣಾಮ ಬೀರಲಿದೆಯೇ?

ಜೆಡಿಎಸ್‌ ವಿರುದ್ಧದ ಅಭ್ಯರ್ಥಿಯಷ್ಟೇ ನಾನು. ಕಾಂಗ್ರೆಸ್‌ ಮುಖಂಡರು ಮಾತ್ರ ಅವರ ಜತೆ ಇರಬಹುದು. ಆದರೆ, ತಳ ಮಟ್ಟದ ಬಹುತೇಕ ಕಾರ್ಯಕರ್ತರು, ಮತದಾರರ ಬೆಂಬಲ ನನಗಿದೆ. ಶೇಕಡಾ 30ರಷ್ಟು ಮತದಾರರ ಒಲವು ಜೆಡಿಎಸ್‌ ಪರ ಇದೆ. ಮತದಾನ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ನೋಡಬೇಕು.

*ನೀವು ಕೂಡ ಕುಟುಂಬ ರಾಜಕಾರಣ ಮಾಡುತ್ತಿದ್ದೀರಿಲ್ಲವೇ?

ನನ್ನ ಮಗ ಜಿಲ್ಲಾ ಪಂಚಾಯಿತಿ ಸದಸ್ಯ. ವೈದ್ಯ ವೃತ್ತಿ ಬಿಟ್ಟು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾನೆ. ಆದರೆ, ಎದುರಾಳಿ ಅಭ್ಯರ್ಥಿಯ ಅನುಭವ ಏನು?. ಕುಟುಂಬದ ವಿರೋಧ ಎನ್ನುವುದಕ್ಕಿಂತ ಹಂತ ಹಂತವಾಗಿ ಮೇಲ್ಮಟ್ಟಕ್ಕೆ ಬರಬೇಕು ಎನ್ನುವುದು ನನ್ನ ಭಾವನೆ. ತಳಮಟ್ಟದಲ್ಲಿ ಸೇವೆ ಸಲ್ಲಿಸಿ ಸಂಸದನ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಅರ್ಥ ಇದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೆ ಲೋಕಸಭೆಯಲ್ಲಿ ಮಾತನಾಡಲು ಎರಡು ನಿಮಿಷ ಅವಕಾಶ ಸಿಗುತ್ತಿಲ್ಲ. ಇನ್ನು ಇವರಿಗೆ ಎಲ್ಲಿ ಅವಕಾಶ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.