ADVERTISEMENT

‘ನಿರುದ್ಯೋಗ ಸಮಸ್ಯೆಗೆ ಮೋದಿಯೇ ಕಾರಣ’

ಕೊಡಗಿನಲ್ಲಿ ಮೋದಿ ಯುವಜನ ವಿರೋಧಿ ಜಾಥಾ ಆರಂಭ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 13:01 IST
Last Updated 5 ಏಪ್ರಿಲ್ 2019, 13:01 IST
ಮಡಿಕೇರಿಯ ಹಳೇ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ ಮೋಧಿ ವಿರೋಧಿ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ವಕೀಲ ಅನಂತನಾಯ್ಕ ಮಾತನಾಡಿದರು
ಮಡಿಕೇರಿಯ ಹಳೇ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ ಮೋಧಿ ವಿರೋಧಿ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ವಕೀಲ ಅನಂತನಾಯ್ಕ ಮಾತನಾಡಿದರು   

ಮಡಿಕೇರಿ: ಯುವ ಕಾಂಗ್ರೆಸ್ ಹಾಗೂ ಯುವ ಜನತಾದಳದ ಆಶ್ರಯದಲ್ಲಿ ಹಮ್ಮಿಕೊಂಡಿರುವ ‘ಮೋದಿ ಯುವಜನ ವಿರೋಧಿ’ ಜಾಥಾಕ್ಕೆ ಶುಕ್ರವಾರ ನಗರದಲ್ಲಿ ಚಾಲನೆ ದೊರೆಯಿತು. ಈ ಜಾಥಾವು ಜಿಲ್ಲೆಯಾದ್ಯಂತ ಸಂಚರಿಸಲಿದೆ.

ಜಾಥಾಕ್ಕೆ ಚಾಲನೆ ನೀಡಿದ ಹೈಕೋರ್ಟ್‌ ವಕೀಲ ಅನಂತ್‌ನಾಯ್ಕ ಮಾತನಾಡಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಮೂಲಕ ಸದೃಢದೇಶ ಕಟ್ಟುವ ಬದಲಿಗೆ ನಿರುದ್ಯೋಗದ ಟೈಂಬಾಂಬ್‌ ಫಿಕ್ಸ್‌ ಮಾಡಲಾಗಿದೆ ಎಂದು ಆರೋಪಿಸಿದರು.

‘ಮೋದಿಯ ಟೈಂಬಾಂಬ್ ಯಾವಾಗ ಸಿಡಿಯುತ್ತೋ ಗೊತ್ತಿಲ್ಲ; ನಿರುದ್ಯೋಗ ಸಮಸ್ಯೆಯಿಂದ ಯುವಕರು ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವಂಥ ಹೀನಾಯ ಸ್ಥಿತಿಗೆ ರಾಷ್ಟ್ರ ತಲುಪಿದೆ. ಇದಕ್ಕೆಲ್ಲ ಮೋದಿ ಅವರೇ ನೇರ ಹೊಣೆ’ ಎಂದು ಟೀಕಿಸಿದರು.

ADVERTISEMENT

‘ಮೋದಿ ಅಳವಡಿಸಿರುವ ಟೈಂಬಾಂಬ್‌ ಅನ್ನು ಯುವಕರೇ ಮುಂದೆ ನಂತು ನಿಷ್ಕ್ರಿಯಮಾಡಬೇಕು. ಆದ್ದರಿಂದ, ಯುವಕರೆಲ್ಲ ಜಾಗೃತರಾಗಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಪರ ಸರ್ಕಾರವನ್ನು ಸೋಲಿಸುವುದಕ್ಕೆಮುಂದಾಗಿ’ ಎಂದು ಕರೆ ನೀಡಿದರು.

ದೇಶದಲ್ಲಿ ಬಿಜೆಪಿಯ ಕೆಲವು ಮುಖಂಡರು ದೇಶದ ಆಂತರಿಕ ಗುಪ್ತಚರದಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿಗೆ ಯಾವುದೇ ನಾಚಿಕೆ ಇಲ್ಲ; ನರೇಂದ್ರ ಮೋದಿ ಅವರು ಪಾಕಿಸ್ತಾನದ ಉಗ್ರರ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಾಪ ಸಿಂಹ ನಿಜವಾಗಿ ಇಲ್ಲಿಯ ಅಭಿವೃದ್ಧಿ ಬಯಸಿದ್ದರೆ, ಇಲ್ಲಿನ ಜನರ ಜೊತೆ ಬೆರೆಯಬೇಕಿತ್ತು. ಆದರೆ, ಇಲ್ಲಿಯ ಜನರ ಕೈಗೆ ಸಿಗುತ್ತಿಲ್ಲ. ಸಂಕಷ್ಟದ ಸಂದರ್ಭದಲ್ಲೆ ರಾಜಕೀಯಕ್ಕೆ ಒತ್ತು ನೀಡುವ ಸಂಸದ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಒತ್ತು ನೀಡಬೇಕಾಗಿದ್ದ ಪ್ರತಾಪ ಸಿಂಹ, ಲೋಕಸಭೆಯಲ್ಲಿ ಈ ಬಗ್ಗೆ ಒಂದು ಪ್ರಶ್ನೆ ಕೇಳಿಲ್ಲ. ಈ ಬಗ್ಗೆ ಕೇಂದ್ರದಲ್ಲಿ ಯಾವುದೇ ಚರ್ಚೆಗಳು ಆಗದಿರುವುದರಿಂದ ನೂತನ ಯೋಜನೆ ಭಾಗ್ಯ ಕೊಡಗಿಗೆ ಸಿಕ್ಕಿಲ್ಲ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಕೆ. ಮಂಜುನಾಥ್‌ ಕುಮಾರ್‌ ಮಾತನಾಡಿ, 5 ವರ್ಷಗಳಿಂದ ಪ್ರತಾಪ ಸಿಂಹ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಾರದೇ ಜಿಲ್ಲೆಗೆ ಘೋರ ಅನ್ಯಾಯ ಮಾಡಿದ್ದಾರೆ. ಈ ಅನ್ಯಾಯವನ್ನು ಸಹಿಸಿದ ಜನರಿಗೆ ಚುನಾವಣೆ ಮೂಲಕ ಉತ್ತರ ನೀಡಬೇಕು ಎಂದು ಮನವಿ ಮಾಡಿದರು.

ಯುವ ಜನತಾದಳ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಲ್.ವಿ ಶ್ವ ಮಾತನಾಡಿ, ಈ ಬಾರಿ ಮೈತ್ರಿ ಗೆಲುವು ನಿಶ್ಚಿತ. ಪಕ್ಷದಲ್ಲಿ ಯುವ ಕಾರ್ಯಕರ್ತರು ಹೆಚ್ಚುತ್ತಿರುವುದರಿಂದ ಪಕ್ಷ ಸಂಘಟನೆ ಬಲಗೊಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹನನ್ನು ಸೋಲಿಸಿ ಈ ಬಾರಿ ಮೈತ್ರಿ ಅಭ್ಯರ್ಥಿ ವಿಜಯ ಶಂಕರ್‌ಗೆ ಬಲ ತುಂಬ ಬೇಕಿದೆಎಂದು ವಿಶ್ವ ಹೇಳಿದರು.

ಜಾಥಾದಲ್ಲಿ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹನೀಫ್ ಸಂಪಾಜೆ, ಕಾಂಗ್ರೆಸ್‌ ಮುಖಂಡರಾದ ಕೆ.ಪಿ. ಚಂದ್ರಕಲಾ, ಸುರಯ್ಯ ಅಬ್ರಾರ್‌, ಅಬ್ದುಲ್‌ ರಜಾಕ್‌, ಉಸ್ಮಾನ್‌, ನಗರ ಜೆಡಿಎಸ್ ಅಧ್ಯಕ್ಷ ರವಿಕಿರಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.