ADVERTISEMENT

ಅನಿವಾಸಿ ಭಾರತೀಯರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ: ಡಾ.ಆರತಿ ಕೃಷ್ಣ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:09 IST
Last Updated 12 ಏಪ್ರಿಲ್ 2019, 15:09 IST
ಡಾ.ಆರತಿ ಕೃಷ್ಣ ------ 
ಡಾ.ಆರತಿ ಕೃಷ್ಣ ------    

ತೀರ್ಥಹಳ್ಳಿ: ಲೋಕಸಭಾ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಅನಿವಾಸಿ ಭಾರತೀಯ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಡಾ.ಆರತಿ ಕೃಷ್ಣ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅನೇಕ ಕಡೆಗಳಲ್ಲಿ ಅನಿವಾಸಿ ಭಾರತೀಯರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದರು.

ಬಿಜೆಪಿ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದೆ. ಆದರೆ, ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿಲ್ಲ. ಅಭ್ಯರ್ಥಿಗಳ ಸಾಧನೆಯ ಬಗ್ಗೆ ಆ ಪಕ್ಷದಲ್ಲಿಯೇ ಒಮ್ಮತವಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ನೀಡಿದ ಕಾರ್ಯಕ್ರಮಗಳು ಜನರ ಮನಸ್ಸಿನಲ್ಲಿ ಹಸಿರಾಗಿ ನಿಂತಿವೆ. ಒಂದು ದೊಡ್ಡ ಬದಲಾವಣೆಗೆ ಮತದಾರರು ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಬೆಂಬಲಿಸಬೇಕು ಎಂದರು.

ADVERTISEMENT

ಶಿವಮೊಗ್ಗ ಜಿಲ್ಲೆಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸಬಹುದು. ನಿರುದ್ಯೋಗ, ಕಸ್ತೂರಿರಂಗನ್ ವರದಿ, ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಮಧು ಬಂಗಾರಪ್ಪ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಅಡಿಕೆ ಆರೋಗ್ಯಕ್ಕೆ ಹಾನಿಕರ, ಗುಟ್ಕಾ ತಿಂದರೆ ಕ್ಯಾನ್ಸರ್ ಬರುತ್ತದೆ ಎಂದು ಬಿಜೆಪಿ ಸಂಸದರು ಹೇಳುತ್ತಾರೆ. ಅಡಿಕೆ ಬೆಳೆಗಾರರ ಸಮಸ್ಯೆಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ. ಬಿಜೆಪಿಯಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಹೇಳಿದರು.

‘ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸಂಸದರಾಗಿ ವಿಫಲರಾಗಿದ್ದಾರೆ. ಬಿಜೆಪಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿ ಆಗಿಲ್ಲ. ಸೌದಿಯಿಂದ ಉದ್ಯೋಗ ಕಳೆದುಕೊಂಡು ದೇಶಕ್ಕೆ ವಾಪಸ್ಸಾದವರಿಗೆ ನಮ್ಮ ದೇಶದಲ್ಲಿ ಉದ್ಯೋಗ ಸಿಗುತ್ತಿಲ್ಲ. ಕಾಂಗ್ರೆಸ್ ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರ ಕೈ ಬಲಪಡಿಸಬೇಕು’ ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಸಮನ್ವಯದ ಕೊರತೆ ಇದ್ದಂತೆ ಕಾಣುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಈ ಕುರಿತು ಮಧು ಬಂಗಾರಪ್ಪ ಅವರ ಗಮನಕ್ಕೆ ತರಲಾಗುವುದು. ಬೂತ್ ಮಟ್ಟದಲ್ಲಿ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಡಾ.ಆರತಿ ಕೃಷ್ಣ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಅನಿವಾಸಿ ಭಾರತೀಯರಾದ ಅಬ್ದುಲ್ ಶಖೀಲ್ ಅಹಮದ್, ಮಸೂದ್ ಬಹೆರೇನ್, ಮಹಮದ್ ಇಕ್ಬಾಲ್, ಸ್ಥಳೀಯ ಮುಖಂಡರಾದ ಅನ್ನಪೂರ್ಣ ಮೋಹನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.